ವಾಲ್ಮೀಕಿ ಹಗರಣ: ಇ.ಡಿ. ದಿನವಿಡೀ ಶೋಧ

| Published : Jul 11 2024, 01:39 AM IST / Updated: Jul 11 2024, 06:42 AM IST

Karnataka Valmiki Maharshi

ಸಾರಾಂಶ

ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಈಗ ಇ.ಡಿ. ಪ್ರವೇಶಿಸಿದೆ. ಬೆಂಗಳೂರಿನ್ಲಲಿ ನಾಗೇಂದ್ರ, ದದ್ದಲ್‌ ಮನೆಗಳನ್ನು ಶೋಧಿಸಿದೆ.

 ಬೆಂಗಳೂರು :  ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ರಾಜಧಾನಿ ಬೆಂಗಳೂರಿನಲ್ಲಿ ದಿನವಿಡೀ ಕಾರ್ಯಾಚರಣೆ ನಡೆಸಿತು.

ಬುಧವಾರ ಬೆಳ್ಳಂಬೆಳಗ್ಗೆ ನಗರದಲ್ಲಿನ ಮಾಜಿ ಸಚಿವ ಬಿ.ನಾಗೇಂದ್ರ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಸೇರಿದಂತೆ ಬ್ಯಾಂಕ್‌ ಸಿಬ್ಬಂದಿಯ ನಿವಾಸಗಳಲ್ಲಿ ಶೋಧ ಕಾರ್ಯ ನಡೆಸಿದೆ. ಡಾಲರ್ಸ್‌ ಕಾಲೋನಿಯಲ್ಲಿನ ರಾಮ್ಕ್ಯಾ ಉತ್ಸವ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಯಿತು. ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿ ನಿವಾಸ ಇದ್ದು, ಇ.ಡಿ. ಅಧಿಕಾರಿಗಳು ಸಂಜೆವರೆಗೆ ವಿಚಾರಣೆ ಮತ್ತು ಶೋಧ ನಡೆಸಿದರು. ವಿಚಾರಣೆ ವೇಳೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇನ್ನು, ಬಸನಗೌಡ ದದ್ದಲ್‌ ಅವರ ಯಲಹಂಕ ಬಳಿಕ ಶ್ರೀನಿವಾಸಪುರದಲ್ಲಿನ ನಿವಾಸದ ಮೇಲೆ ಕಾರ್ಯಾಚರಣೆ ಕೈಗೊಂಡು ಅವರನ್ನು ಸಹ ವಿಚಾರಣೆಗೊಳಪಡಿಸಲಾಯಿತು. ಈ ವೇಳೆ ಅವರ ಪಾತ್ರದ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಬೆಳ್ಳಂಬೆಳಗ್ಗೆ ಇ.ಡಿ. ಅಧಿಕಾರಿಗಳ ದಾಳಿಯಿಂದಾಗಿ ಕುಟುಂಬ ಸದಸ್ಯರು ಆತಂಕಗೊಂಡಿದ್ದರು ಎಂದು ಹೇಳಲಾಗಿದೆ.

ನಾಗೇಂದ್ರ ಮತ್ತು ಬಸನಗೌಡ ದದ್ದಲ್‌ ಅವರ ಶಾಸಕರ ಭವನದಲ್ಲಿನ ಕೊಠಡಿಯಲ್ಲಿಯೂ ಇ.ಡಿ. ಅಧಿಕಾರಿಗಳು ಶೋಧ ನಡೆಸಿದರು. ಹಗರಣ ಸಂಬಂಧ ಕೆಲವೊಂದು ಚರ್ಚೆಗಳು ಶಾಸಕರ ಭವನದ ಕೊಠಡಿಯಲ್ಲಿಯೇ ನಡೆದಿದ್ದವು ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಅಲ್ಲದೇ, ಅಲ್ಲಿ ಕೆಲವು ದಾಖಲೆಗಳು ಲಭ್ಯವಾಗುವ ಸಾಧ್ಯತೆ ಮೇರೆಗೆ ನಾಗೇಂದ್ರ ಅವರ ಕೊಠಡಿ ಸಂಖ್ಯೆ 360 ಮತ್ತು ಬಸನಗೌಡ ದದ್ದಲ್‌ ಅವರ ಕೊಠಡಿ ಸಂಖ್ಯೆ 532ರಲ್ಲಿ ತಪಾಸಣೆ ನಡೆಸಲಾಯಿತು.

ಇನ್ನು, ವಸಂತನಗರದಲ್ಲಿನ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಮೇಲೂ ಇ.ಡಿ. ಅಧಿಕಾರಿಗಳು ಶೋಧ ನಡೆಸಿದರು. ಕಚೇರಿ ತೆರೆಯುವವರೆಗೆ ಮುಂಭಾಗದಲ್ಲಿಯೇ ಕಾದು ಕುಳಿತ ಅಧಿಕಾರಿಗಳು ಕಚೇರಿ ತೆಗೆಯುತ್ತಿದ್ದಂತೆ ತಮ್ಮ ಸುರ್ಪದಿಗೆ ಪಡೆದು ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಈ ನಡುವೆ, ಬ್ಯಾಂಕ್‌ ಸಿಬ್ಬಂದಿಯ ನಿವಾಸಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಯೂನಿಯನ್‌ ಬ್ಯಾಂಕ್‌ನ ಎಂ.ಜಿ.ರಸ್ತೆ ಶಾಖೆಯ ಸುಚಿಸ್ಮಿತಾ ಅವರ ಕೋರಮಂಗಲ ಮನೆ, ಉಪ ವ್ಯವಸ್ಥಾಪಕಿ ದೀಪಾ ಅವರ ವಿಜಯನಗರ ಮತ್ತು ಕ್ರೆಡಿಟ್‌ ಅಧಿಕಾರಿ ಕೃಷ್ಣಮೂರ್ತಿ ಅವರ ಜೆ.ಜೆ.ನಗರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಆದರೆ, ದೀಪಾ ಅವರು ಮನೆಯಲ್ಲಿಲ್ಲದ ಕಾರಣ ಮನೆ ಬಾಗಿಲು ಸೀಲ್ ಮಾಡಲಾಗಿದೆ. ಕಳೆದ ಒಂದು ವಾರದಿಂದ ದೀಪಾ ಮನೆ ಖಾಲಿ ಇದೆ ಎಂದು ಹೇಳಲಾಗಿದೆ. ಪ್ರಕರಣದ ಕುರಿತು ಸಿಬಿಐ ಸಹ ತನಿಖೆ ಕೈಗೊಂಡಿರುವುದರಿಂದ ಒಂದು ವಾರದ ಹಿಂದೆಯೇ ಮನೆ ಸೀಲ್ ಮಾಡಲಾಗಿದೆ. ಮನೆಯನ್ನು ತೆಗೆಯಬೇಕಾದರೆ ಸಿಬಿಐ ಅಧಿಕಾರಿಗಳನ್ನು ಸಂಪರ್ಕ ಮಾಡಿ ಎಂಬ ನೊಟೀಸ್‌ ಸಹ ಅಂಟಿಸಲಾಗಿದೆ. ಹೀಗಾಗಿ ಅವರ ಮನೆಯಲ್ಲಿ ಶೋಧ ನಡೆಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.