ವಾಸಂತಿ ಸತ್ತಿಲ್ಲ, ಬದುಕಿದ್ದಾರೆ - ಸುಜಾತ : ಎಸ್‌ಐಟಿ ಅಧಿಕಾರಿಗಳನ್ನೇ ಪ್ರಶ್ನಿಸಿದ ವೃದ್ಧೆ

| N/A | Published : Aug 31 2025, 11:17 AM IST

Sujatha Bhat
ವಾಸಂತಿ ಸತ್ತಿಲ್ಲ, ಬದುಕಿದ್ದಾರೆ - ಸುಜಾತ : ಎಸ್‌ಐಟಿ ಅಧಿಕಾರಿಗಳನ್ನೇ ಪ್ರಶ್ನಿಸಿದ ವೃದ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಮೃತಪಟ್ಟಿದ್ದಾರೆ ಎನ್ನಲಾದ ವಾಸಂತಿ ಶ್ರೀವತ್ಸ ಇನ್ನೂ ಜೀವಂತ ಇದ್ದಾಳೆ‌ ಎಂದು ಅನನ್ಯಾ ಭಟ್ ಅವರ ತಾಯಿ ಎನ್ನುತ್ತಿರುವ ಸುಜಾತಾ ಭಟ್ ಎಸ್ಐಟಿ ಮುಂದೆ ಸ್ಫೋಟಕ ಹೇಳಿಕೆ‌ ನೀಡಿದ್ದಾರೆ.

  ಮಂಗಳೂರು :  ಮೃತಪಟ್ಟಿದ್ದಾರೆ ಎನ್ನಲಾದ ವಾಸಂತಿ ಶ್ರೀವತ್ಸ ಇನ್ನೂ ಜೀವಂತ ಇದ್ದಾಳೆ‌ ಎಂದು ಅನನ್ಯಾ ಭಟ್ ಅವರ ತಾಯಿ ಎನ್ನುತ್ತಿರುವ ಸುಜಾತಾ ಭಟ್ ಎಸ್ಐಟಿ ಮುಂದೆ ಸ್ಫೋಟಕ ಹೇಳಿಕೆ‌ ನೀಡಿದ್ದಾರೆ. 

ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ವೇಳೆ ಅನನ್ಯಾ ಭಟ್‌ ನನ್ನ ಮಗಳು. ಆಕೆ ಧರ್ಮಸ್ಥಳದಲ್ಲಿ ಕಾಣೆ ಆಗಿದ್ದಾಳೆ. ಅವರ ಅಸ್ಥಿ ಕೊಡಿ ಎಂದು ಸುಜಾತಾ ಭಟ್ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಚುರುಕುಗೊಳಿಸಿದ ವೇಳೆ ಆಕೆ ನನ್ನ ಮಗಳೇ ಅಲ್ಲ. ಎಲ್ಲ ಸುಳ್ಳು ಕಥೆ ಎಂದು ಸುಜಾತಾ ಭಟ್‌ ಹೇಳಿಕೆ ನೀಡಿದ್ದರು. ಆದರೆ ಪ್ರಕರಣವನ್ನು ಕೈಬಿಡಲು ಒಪ್ಪದ ಎಸ್‌ಐಟಿ, ಶುಕ್ರವಾರ ನಾಲ್ಕನೇ ಬಾರಿಗೆ ಸುಜಾತಾ ಅವರನ್ನು ವಿಚಾರಣೆ ನಡೆಸಿತು. ಈ ವೇಳೆ ಸುಜಾತಾ ಭಟ್ ಅವರು, ತಾನು ತೋರಿಸಿದ ಅನನ್ಯಾ ಭಟ್ ಫೋಟೋ ಎಂದು ಸುಳ್ಳು ಹೇಳಿದ್ದು, ಅದು ವಾಸಂತಿ ಫೋಟೋ ಆಗಿತ್ತು ಎಂದಿದ್ದಾರೆ. ಸುಜಾತಾ ಭಟ್ ಹೇಳಿಕೆ ಕೇಳಿ ತನಿಖಾಧಿಕಾರಿಗಳು ದಂಗಾಗಿದ್ದಾರೆ.

ವಾಸಂತಿಯ ಶವ ಎಂದು ನದಿಯಲ್ಲಿ ಸಿಕ್ಕಿದ ಕೊಳೆತ ಶವ ತೋರಿಸಲಾಗಿದೆ. ಅದು ವಾಸಂತಿಯ ಶವ ಆಗಿರಲಿಲ್ಲ, ಕೊಳೆತ ಶವ ವಾಸಂತಿಯದ್ದು ಎಂದು ಹೇಗೆ‌ ನಂಬಿದಿರಿ ಎಂದು ಸುಜಾತಾ ಭಟ್ ಪೋಲಿಸರನ್ನೇ ತಬ್ಬಿಬ್ಬುಗೊಳಿಸಿದ್ದಾರೆ.

ಸುಜಾತಾ ಭಟ್ ನೀಡಿರುವ ಮಾಹಿತಿ ಆಧಾರದಲ್ಲಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಮಡಿಕೇರಿ ಮೂಲದ ವಾಸಂತಿ ಬಗ್ಗೆಯೇ ಸುಜಾತಾ ಭಟ್ ಮತ್ತೊಂದು ಕಟ್ಟುಕಥೆ ಕಟ್ಟಿದರೇ ಎಂದು ಎಸ್ಐಟಿ ಅಧಿಕಾರಿಗಳು ಶಂಕೆ ಪಡುವಂತಾಗಿದೆ.ಅನನ್ಯಾ ಭಟ್‌ ನನ್ನ ಪುತ್ರಿ ಎಂದು ಹೇಳಿ, ವಾಸಂತಿಯ ಫೋಟೋವನ್ನು ಸುಜಾತಾ ಭಟ್‌ ನೀಡಿದ್ದರು. ಬಳಿಕ ಈಗಾಗಲೇ ಸುಜಾತಾ ಭಟ್‌ ವಿಚಾರಣೆಯನ್ನು ಮುಗಿಸಿರುವ ಎಸ್‌ಐಟಿ ಶುಕ್ರವಾರ ಆಕೆ ಬೆಂಗಳೂರಿಗೆ ತೆರಳಲು ಅವಕಾಶ ನೀಡಿದೆ.

ಧರ್ಮಸ್ಥಳ ಅಪಪ್ರಚಾರ: ಮತ್ತೆ ಸಮೀರ್‌ ವಿಚಾರಣೆ 

ಕೃತಕ ಬುದ್ಧಿಮತ್ತೆ(ಎಐ) ತಾಂತ್ರಿಕತೆ ಬಳಸಿ ಧರ್ಮಸ್ಥಳ ದೇಗುಲ ವಿರುದ್ಧ ದೂತ ಎನ್ನುವ ಯುಟ್ಯೂಬ್‌ ಚಾನೆಲ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ ಪ್ರಕರಣದಲ್ಲಿ ಯೂಟ್ಯೂಬರ್‌ ಎಂ.ಡಿ.ಸಮೀರ್‌ ಮೂರನೇ ಬಾರಿ ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಸುಮಾರು 45 ನಿಮಿಷ ಆತನ ವಿಚಾರಣೆ ನಡೆಸಿದ ಪೊಲೀಸರು ಆತನಿಂದ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಮೂಲ ದಾಖಲೆ ವಿಡಿಯೋ ಹಾಗೂ ಹಲವು ತಾಂತ್ರಿಕ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಉಜಿರೆ ಆಸ್ಪತ್ರೆಯಲ್ಲಿ ಅಕ್ರಮ ಕೂಟ ಸೇರಿ ನಡೆಸಿದ ಗಲಾಟೆ, ವರದಿಗಾರನಿಗೆ ಹಲ್ಲೆ ನಡೆಸಿದ ಮತ್ತೊಂದು ಕೇಸಿಗೆ ಸಂಬಂಧಿಸಿ ಸೆ.3ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಮೂರನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮೊನ್ನೆಯೇ ನೋಟಿಸ್‌ ನೀಡಿದ್ದರು. ಆದರೆ ಅನಾರೋಗ್ಯದ ಕಾರಣ ನೀಡಿ ಸಮೀರ್‌ ಶುಕ್ರವಾರ ವಿಚಾರಣೆಗೆ ಗೈರಾಗಿದ್ದರು.

ಈ ಹಿಂದೆ ಎರಡು ಬಾರಿ ವಿಚಾರಣೆ ನಡೆಸಿದ ವೇಳೆಯೂ ಎಸ್‌ಐಟಿ ಅಧಿಕಾರಿಗಳು ಸಮೀರ್‌ರಿಂದ ಹಾರ್ಡ್‌ ಡಿಸ್ಕ್‌, ಪೆನ್‌ಡ್ರೈವ್‌ ವಶಪಡಿಸಿಕೊಂಡಿದ್ದರು. ಮೊದಲ ಬಾರಿ ಹಾಜರಾದಾಗ 5 ಗಂಟೆಗಳ ಕಾಲ, 2ನೇ ಬಾರಿ ಆರು ಗಂಟೆಗೂ ಹೆಚ್ಚು ಕಾಲ ಪೊಲೀಸರು ವಿಚಾರಣೆ ನಡೆಸಿದ್ದರು.

ಬುರುಡೆ ಷಡ್ಯಂತ್ರದ ಸಾಕ್ಷ್ಯ ಸಂಗ್ರಹ

ನಂತರ ಸಂಚುಕೋರರ ಬಂಧನ?

ಧರ್ಮಸ್ಥಳ ತಲೆಬುರುಡೆ ಸಂಚಿನ ಕುರಿತು ಆರೋಪಿ ಚಿನ್ನಯ್ಯನ ಹೇಳಿಕೆಗೆ ಪೂರಕವಾಗಿ ಸಾಕ್ಷ್ಯ ಸಂಗ್ರಹಿಸಿದ ಬಳಿಕ ಸಂಚುಕೋರರ ಪತ್ತೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ತಲೆಬುರುಡೆ ಸುಳ್ಳಿನ ಕತೆ ಸೃಷ್ಟಿಸಿದ ಪ್ರಕರಣದಲ್ಲಿ ಚಿನ್ನಯ್ಯನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಲೆಬುರುಡೆ ಹಾಗೂ ಸಂಚುಕೋರರ ಬಗ್ಗೆ ಆತ ಮಾಹಿತಿ ನೀಡಿದ್ದಾನೆ. ಆದರೆ ಚಿನ್ನಯ್ಯನ ಮಾತಿನ ಮೇಲೆ ವಿಶ್ವಾಸವಿಲ್ಲ. ಏಕೆಂದರೆ ನ್ಯಾಯಾಲಯದಲ್ಲಿ ಸಿಆರ್‌ಪಿಸಿ 164ರಡಿ ನೀಡಿದ ಹೇಳಿಕೆಯನ್ನೇ ಆತ ಬದಲಾಯಿಸಿದ್ದಾನೆ. ಧರ್ಮಸ್ಥಳದಲ್ಲಿ ಅತ್ಯಾಚಾರ ನಡೆಸಿ ಹೂತು ಹಾಕಲಾಗಿದ್ದ ಮಹಿಳೆಯ ತಲೆಬುರುಡೆ ಎಂದು ನ್ಯಾಯಾಲಯದಲ್ಲಿ ಚಿನ್ನಯ್ಯ ಹೇಳಿಕೆ ಕೊಟ್ಟಿದ್ದ. ಆದರೆ ತನಿಖೆಯಲ್ಲಿ ಆ ಹೇಳಿಕೆ ಸುಳ್ಳಾಯಿತು. ಹೀಗಾಗಿ ಈಗ ಪೊಲೀಸ್ ವಶದಲ್ಲಿದ್ದಾಗ ನೀಡಿರುವ ಚಿನ್ನಯ್ಯನ ಹೇಳಿಕೆಗೆ ಪೂರಕವಾಗಿ ಪುರಾವೆ ಹುಡುಕಾಟ ನಡೆಸಲಾಗಿದೆ. ಸಾಕ್ಷ್ಯ ಲಭಿಸಿದ ಬಳಿಕ ಸಂಚುಕೋರರನ್ನು ಬಂಧಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಟಿ.ಜಯಂತ್ ಮನೆಯಲ್ಲಿ ಪರಿಶೀಲಿಸಿ ಮಹಜರ್ ನಡೆಸಲಾಗಿದೆ. ಚಿನ್ನಯ್ಯನ ವಿಚಾರಣೆ ಸಂಪೂರ್ಣವಾಗಿ ಮುಕ್ತಾಯವಾದ ನಂತರ ಸಂಚುಕೋರರ ಪತ್ತೆಗೆ ಕಾರ್ಯಾಚರಣೆ ಚುರುಕಾಗಲಿದೆ ಎಂದು ತಿಳಿದು ಬಂದಿದೆ.

 

Read more Articles on