ಬೆಂಗಳೂರು : ಬೀದಿ ನಾಯಿಗಳಿಗೆ ಹಲ್ಲೆ ಪ್ರಶ್ನಿಸಿದ ಮಹಿಳೆಗೆ ಅವಾಚ್ಯವಾಗಿ ನಿಂದನೆ - ಎಫ್‌ಐಆರ್‌

| Published : Dec 06 2024, 08:59 AM IST / Updated: Dec 06 2024, 09:15 AM IST

ಬೆಂಗಳೂರು : ಬೀದಿ ನಾಯಿಗಳಿಗೆ ಹಲ್ಲೆ ಪ್ರಶ್ನಿಸಿದ ಮಹಿಳೆಗೆ ಅವಾಚ್ಯವಾಗಿ ನಿಂದನೆ - ಎಫ್‌ಐಆರ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೀದಿನಾಯಿಗಳಿಗೆ ಅಟ್ಟಾಡಿಸಿ ಹೊಡೆಯುವುದನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಪ್ರಶ್ನಿಸಿದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ಇಬ್ಬೂರಿನಲ್ಲಿ ನಡೆದಿದೆ.

 ಬೆಂಗಳೂರು : ಬೀದಿ ನಾಯಿಗಳನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬಲೂರಿನ ಸನ್‌ಸಿಟಿ ಅಪಾರ್ಟ್‌ಮೆಂಟ್‌ ಬ್ಲಾಕ್‌-6 ನೆಲಮಹಡಿ ಹಿಂಭಾಗದ ಜಿಮ್‌ ಬಳಿ ಡಿ.3ರಂದು ಬೆಳಗ್ಗೆ ಈ ಘಟನೆ ನಡೆದಿದೆ. ಈ ಸಂಬಂಧ ಇಬ್ಬಲೂರು ಸನ್‌ಸಿಟಿ ಅಪಾರ್ಟ್‌ಮೆಂಟ್ ನಿವಾಸಿ ಮಿನು ಸಿಂಗ್‌ ಎಂಬುವವರು ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ದೂರುದಾರ ಮಿನು ಸಿಂಗ್‌ ಡಿ.3ರಂದು ಬೆಳಗ್ಗೆ 8.30ಕ್ಕೆ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ನಲ್ಲಿದ್ದರು. ಈ ವೇಳೆ ಬೀದಿ ನಾಯಿಗಳು ಚೀರಾಡುವ ಶಬ್ದ ಕೇಳಿಸಿಕೊಂಡು ಹೊರಗೆ ಬಂದಿದ್ದಾರೆ. ಆಗ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿ ಬೀದಿ ನಾಯಿಗಳನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡುತ್ತಿರುವುದು ಕಂಡು ಬಂದಿದೆ.

ಈ ವೇಳೆ ಮಿನು ಸಿಂಗ್‌ ಅವರು ಹೀಗೇಕೆ ಮಾಡುತ್ತಿರುವೆ ಎಂದು ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಅಷ್ಟಕ್ಕೆ ಆ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ಮಿನು ಸಿಂಗ್‌ ಅವರನ್ನು ನಿಂದಿಸಿಕೊಂಡು ಹತ್ತಿರಕ್ಕೆ ಬಂದಿದ್ದಾನೆ. ಅಷ್ಟರಲ್ಲಿ ಮಿನು ಸಿಂಗ್‌ ನೆರೆಹೊರೆಯವರನ್ನು ಕೂಗಿದಾಗ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಬೀದಿ ನಾಯಿಗಳ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನಿಂದಿಸಿದ ಆ ಅಪರಿಚಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಿನು ಸಿಂಗ್‌ ಬೆಳ್ಳಂದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು, ಅಪರಿಚಿತನ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.