ವಿಡಿಯೋ ಗೇಮ್ಸ್‌ ಜೂಜಾಟ:11 ಬಂಧನ, ಯಂತ್ರ ಜಪ್ತಿ

| Published : Feb 18 2024, 01:35 AM IST / Updated: Feb 18 2024, 03:55 PM IST

ಸಾರಾಂಶ

ಅಕ್ರಮವಾಗಿ ವಿಡಿಯೋ ಗೇಮ್‌ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಡಿಯೋ ಗೇಮ್ಸ್‌ ಎಂಬ ಅದೃಷ್ಟದ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ.

ರಾಜರಾಜೇಶ್ವರಿನಗರ ಠಾಣಾ ವ್ಯಾಪ್ತಿಯ ವಿ.ಲೆಗೆಸಿ ರಸ್ತೆಯ ಬಳಿ ರಘು ಆರ್ಕೆಡ್‌ ಬಿಲ್ಡಿಂಗ್‌ನ 2ನೇ ಮಹಡಿಯಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ವಿಡಿಯೋ ಗೇಮ್ಸ್‌ ಅದೃಷ್ಟದ ಜೂಜಾಟದಲ್ಲಿ ತೊಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 9 ಮಂದಿ ಗಿರಾಕಿಗಳು ಹಾಗೂ ಇಬ್ಬರು ಮ್ಯಾನೇಜರ್‌ಗಳು ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ₹23 ಲಕ್ಷ ಮೌಲ್ಯದ 23 ವಿಡಿಯೋ ಗೇಮ್ಸ್‌ ಯಂತ್ರಗಳು, ₹1.74 ಲಕ್ಷ ನಗದು ಜಪ್ತಿ ಮಾಡಲಾಗಿದೆ.

ಈ ಪ್ರಕರಣದಲ್ಲಿ ಜೂಜಾಡಿಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಇಬ್ಬರು ಮಾಲೀಕರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.