ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿ ₹50 ಸಾವಿರಕ್ಕಿಂತ ಅಧಿಕ ಮೊತ್ತದ ದಂಡ ಬಾಕಿ ಉಳಿಸಿಕೊಂಡಿದ್ದ ಕಾರು ಸೇರಿದಂತೆ 85 ವಾಹನಗಳನ್ನು ದಕ್ಷಿಣ ವಿಭಾಗ (ಸಂಚಾರ)ದ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಎಲ್ಲ ವಾಹನಗಳ ಮೇಲೆ 10,210 ಪ್ರಕರಣಗಳು ದಾಖಲಾಗಿದ್ದು, ಸುಮಾರು ₹1.07 ಕೋಟಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಇವುಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ₹50 ಸಾವಿರಕ್ಕಿಂತ ಅಧಿಕ ಮೊತ್ತದ ದಂಡ ಬಾಕಿ ಉಳಿಸಿಕೊಂಡ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಅದರನ್ವಯ ದಕ್ಷಿಣ ವಿಭಾಗ ವ್ಯಾಪ್ತಿಯ 12 ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಡಿಸಿಪಿ ತಿಳಿಸಿದ್ದಾರೆ.
ಠಾಣೆಗಳ ಪೈಕಿ ಜಯನಗರ-26, ಬನಶಂಕರಿ-9, ಕುಮಾರಸ್ವಾಮಿ ಲೇಔಟ್-5, ಬಸವನಗುಡಿ-4, ವಿ.ವಿ.ಪುರ-4, ಹುಳಿಮಾವು-11, ಆಡುಗೋಡಿ-11, ಮೈಕೋ ಲೇಔಟ್-6, ಮಡಿವಾಳ-1, ಎಚ್‌ಎಸ್‌ಆರ್ ಲೇಔಟ್-3, ಎಲೆಕ್ಟ್ರಾನಿಕ್ ಸಿಟಿ-3 ಹಾಗೂ ಬೆಳ್ಳಂದೂರು-2 ಸೇರಿ ಒಟ್ಟು 85 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
ಕೆಲವು ಪ್ರಕರಣಗಳ ಹೊರತುಪಡಿಸಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪೊಲೀಸರು ದಂಡ ವಿಧಿಸಿಲ್ಲ. ಬಹುತೇಕ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಜಂಕ್ಷನ್‌ಗಳಲ್ಲಿರುವ ಹೈ ರೆಸ್ಯೂಲೇಷನ್ ಕ್ಯಾಮೆರಾಗಳ ಫೋಟೋ ಆಧರಿಸಿ ದಂಡ ವಿಧಿಸಲಾಗಿದೆ.
ಈಗ ಮಾಲಿಕರು ದಂಡ ಪಾವತಿಸಿ ವಾಹನ ಬಿಡಿಸಿಕೊಳ್ಳಬಹುದು. ದಂಡ ಪಾವತಿಸದೆ ಹೋದರೆ ವಾಹನಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನುಕ್ರಮ ಜರುಗಿಸಲಾಗುತ್ತದೆ ಎಂದರು.
ಹೆಲ್ಮೆಟ್ ಇಲ್ಲದ ಬೈಕ್‌ಗಳು: ಕಂಪನಿಗೆ ₹1 ಲಕ್ಷ ದಂಡ: ಜಪ್ತಿ ವಾಹನಗಳ ಪೈಕಿ ಖಾಸಗಿ ಕಂಪನಿಯೊಂದರ ಬೈಕ್ ಮೇಲೆ ₹1.44 ಲಕ್ಷ ದಂಡ ಬಾಕಿ ಇರುವುದು ಬೆಳಕಿದೆ ಬಂದಿದೆ.
ಕಳೆದ ಮೂರು ವರ್ಷಗಳಿಂದ ಆ ಕಂಪನಿಯ ಕೆಲಸಗಾರರು ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ತಪ್ಪಿಗೆ 284 ಪ್ರಕರಣಗಳು ದಾಖಲಾಗಿ ದಂಡ ಬಿದ್ದಿದೆ. ಈ ಬೈಕನ್ನು ಜಯನಗರ ಸಂಚಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.