ನಿಯಮ ಉಲ್ಲಂಘನೆ, ತೆರಿಗೆ ಕಟ್ಟದ 33 ವಾಹನ ಜಪ್ತಿ: ₹20 ಲಕ್ಷ ದಂಡ

| Published : Jul 11 2024, 01:32 AM IST / Updated: Jul 11 2024, 04:52 AM IST

ನಿಯಮ ಉಲ್ಲಂಘನೆ, ತೆರಿಗೆ ಕಟ್ಟದ 33 ವಾಹನ ಜಪ್ತಿ: ₹20 ಲಕ್ಷ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ತೆರಿಗೆ ಕಟ್ಟದೆ, ನಿಯಮ ಉಲ್ಲಂಘನೆ ಮಾಡಿದ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮಾಲೀಕರಿಗೆ 20 ಲಕ್ಷ ದಂಡ ವಿಧಿಸಿದ್ದಾರೆ.

 ಬೆಂಗಳೂರು :  ನಿಯಮಗಳ ಉಲ್ಲಂಘನೆ ಹಾಗೂ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ 33 ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿ, ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ತೆರಿಗೆ ಪಾವತಿಸದ, ರಹದಾರಿ ಪಡೆಯದ, ವಾಹನ ವಿಮೆ ಇಲ್ಲದಿರುವುದು ಸೇರಿದಂತೆ ವಿವಿಧ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಸಾರಿಗೆ ಇಲಾಖೆ, ಬುಧವಾರ ಎಚ್‌ಎಸ್‌ಆರ್‌ ಲೇಔಟ್‌, ಕೋರಮಂಗಲ, ಸಿಲ್ಕ್‌ಬೋರ್ಡ್‌, ಬೆಳ್ಳಂದೂರು ಸೇರಿದಂತೆ 10ಕ್ಕೂ ಹೆಚ್ಚಿನ ಕಡೆಗಳಲ್ಲಿ ವಾಹನ ತಪಾಸಣೆ ನಡೆಸಿತು. ಈ ವೇಳೆ ಸಾರಿಗೆ ಅಧಿಕಾರಿಗಳು 1,452 ವಾಹನಗಳನ್ನು ತಪಾಸಣೆ ನಡೆಸಿ, 242 ಪ್ರಕರಣ ದಾಖಲಿಸಿದ್ದಾರೆ. 33 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ವಾಹನಗಳಿಂದ ಅಂದಾಜು ₹20 ಲಕ್ಷಕ್ಕೂ ಹೆಚ್ಚಿನ ದಂಡ ವಸೂಲಿ ಮಾಡಲಾಗಿದೆ.

ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ ವಾಹನಗಳನ್ನು ಪತ್ತೆ ಮಾಡಿ ದಂಡ ವಸೂಲಿ ಮಾಡುವ ಕಾರ್ಯ ಮಾಡಲಾಗಿದೆ. ಪ್ರಮುಖವಾಗಿ ಹೊರರಾಜ್ಯಗಳಲ್ಲಿ ಕಾರು ಖರೀದಿಸಿ, ನೋಂದಣಿ ಮಾಡಿಕೊಂಡು ರಾಜ್ಯದ ಆರ್‌ಟಿಒಗಳ ಅನುಮತಿ ಪಡೆಯದೇ ಸಂಚರಿಸುತ್ತಿದ್ದ ವಾಹನಗಳ ಪತ್ತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ತಿಳಿಸಿರುವ ಅಧಿಕಾರಿಗಳು, ಗುರುವಾರದಿಂದ ಬೇರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲೂ ವಾಹನ ತಪಾಸಣೆ ಮಾಡಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.