ಕುಡಿಯುವ ನೀರಲ್ಲಿ ವಾಹನ ವಾಷ್‌: 22 ಮಂದಿಗೆ ತಲಾ ₹5 ಸಾವಿರ ದಂಡ

| Published : Mar 26 2024, 01:01 AM IST / Updated: Mar 26 2024, 12:54 PM IST

ಕುಡಿಯುವ ನೀರಲ್ಲಿ ವಾಹನ ವಾಷ್‌: 22 ಮಂದಿಗೆ ತಲಾ ₹5 ಸಾವಿರ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪಷ್ಟ ಆದೇಶದ ನಡುವೆಯೂ ಕಾವೇರಿ ಮತ್ತು ಕೊಳವೆಬಾವಿ ನೀರನ್ನು ಬಳಸಿ ವಾಹನ ಸ್ವಚ್ಛಗೊಳಿಸುತ್ತಿದ್ದ 22 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಜಲಮಂಡಳಿ, ₹1.10 ಲಕ್ಷ ದಂಡ ವಸೂಲಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ಪಷ್ಟ ಆದೇಶದ ನಡುವೆಯೂ ಕಾವೇರಿ ಮತ್ತು ಕೊಳವೆಬಾವಿ ನೀರನ್ನು ಬಳಸಿ ವಾಹನ ಸ್ವಚ್ಛಗೊಳಿಸುತ್ತಿದ್ದ 22 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಜಲಮಂಡಳಿ, ₹1.10 ಲಕ್ಷ ದಂಡ ವಸೂಲಿ ಮಾಡಿದೆ.

ನೀರಿನ ಅಭಾವ ಹಿನ್ನೆಲೆಯಲ್ಲಿ ಕುಡಿಯಲು ಮತ್ತು ಗೃಹ ಬಳಕೆಗೆ ಬಳಸಲಾಗುವ ನೀರಿನಲ್ಲಿ ವಾಹನ ತೊಳೆಯಬಾರದು ಎಂದು ಜಲಮಂಡಳಿ ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೂ, ಅದನ್ನು ಲೆಕ್ಕಿಸದ ಕೆಲವರು ಕುಡಿಯಲು ಮತ್ತು ಗೃಹ ಬಳಕೆಗೆ ಬಳಸಲಾಗುವ ನೀರಿನಲ್ಲಿಯೇ ವಾಹನಗಳನ್ನು ತೊಳೆಯುತ್ತಿರುವುದು ಕಂಡು ಬಂದಿದೆ. 

ಅದನ್ನು ತಡೆಯುವ ಸಲುವಾಗಿ ಜಲಮಂಡಳಿಯು ಸೋಮವಾರದಿಂದ ವಿಶೇಷ ತಪಾಸಣಾ ಕಾರ್ಯ ಕೈಗೊಂಡಿದೆ. ಅದರಂತೆ ಸೋಮವಾರ 22 ಮಂದಿ ನಿಯಮ ಮೀರಿ ವಾಹನ ಸ್ವಚ್ಛಗೊಳಿಸುತ್ತಿರುವುದು ಕಂಡು ಬಂದಿದ್ದು, ಅವರ ವಿರುದ್ಧ ನಿಯಮದಂತೆ ಪ್ರಕರಣ ದಾಖಲಿಸಿ ತಲಾ ₹5 ಸಾವಿರ ದಂಡ ವಿಧಿಸಲಾಗಿದೆ.

ರೈನ್‌, ಪೂಲ್‌ ಡ್ಯಾನ್ಸ್‌ ಆಯೋಜಿಸಿದ್ದರೆ ಕ್ರಮ: ಜಲಮಂಡಳಿ ಎಚ್ಚರಿಕೆ ನಡುವೆಯೂ ಹೋಟೆಲ್‌ಗಳು ಹೋಳಿ ಹಬ್ಬದ ಅಂಗವಾಗಿ ಕಾವೇರಿ ಹಾಗೂ ಕೊಳವೆಬಾವಿ ನೀರಿನಲ್ಲಿ ರೈನ್‌ ಡ್ಯಾನ್ಸ್‌, ಪೂಲ್‌ ಡ್ಯಾನ್ಸ್‌ ಆಯೋಜಿಸಿರುವ ಕುರಿತು ದೂರುಗಳು ಬಂದರೆ ಕೂಡಲೇ ಅಂತಹ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ಪ್ರಸಾತ್‌ ಮನೋಹರ್‌ ಎಚ್ಚರಿಕೆ ನೀಡಿದ್ದಾರೆ.

ವಾಣಿಜ್ಯ ಉದ್ದೇಶಕ್ಕಾಗಿ ನೀರು ಪೂರೈಸಿದ ಟ್ಯಾಂಕರ್‌: ಕೇಸ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರನ್ನು ವಿತರಿಸಲು ಉದ್ದೇಶಿಸಿದ್ದ ನೀರನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿದ ಕಾರಣಕ್ಕಾಗಿ ಖಾಸಗಿ ಟ್ಯಾಂಕರ್‌ ಚಾಲಕ ಸುನೀಲ್‌ ವಿರುದ್ಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಜಲಮಂಡಳಿ ದೂರು ದಾಖಲಿಸಿದೆ.

ನೀರು ಪೂರೈಸುವ ಕುರಿತಂತೆ ಖಾಸಗಿ ಟ್ಯಾಂಕರ್‌ಗಳು ಜಲಮಂಡಳಿ ಮತ್ತು ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡಿವೆ. ಅವುಗಳಿಗೆ ಜಲಮಂಡಳಿ ಮತ್ತು ಬಿಬಿಎಂಪಿಯಿಂದಲೇ ಕೊಳವೆಬಾವಿ ಅಥವಾ ಇತರ ನೀರಿನ ಮೂಲದಿಂದ ನೀರು ನೀಡುತ್ತಿದೆ. 

ಆ ನೀರನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವಂತೆ ಟ್ಯಾಂಕರ್‌ಗಳಿಗೆ ಸೂಚಿಸಲಾಗಿದೆ. ಆದರೆ, ಕೆಎ 52 ಸಿ 0204 ಸಂಖ್ಯೆಯ ಖಾಸಗಿ ಟ್ಯಾಂಕರ್‌ ಚಾಲಕ ಸುನೀಲ್‌ ಎಂಬಾತ ಸಾರ್ವಜನಿಕರಿಗೆ ಪೂರೈಸಬೇಕಿದ್ದ ನೀರನ್ನು ಶೆಟ್ಟಿಹಳ್ಳಿ ಮುಖ್ಯರಸ್ತೆಯ ಮಲ್ಲಸಂದ್ರದಲ್ಲಿ ವಾಣಿಜ್ಯ ಉದ್ದೇಶಕ್ಕೆ ಖಾಸಗಿಯವರಿಗೆ ನೀಡಿದ್ದು ತಿಳಿದುಬಂದಿದೆ. 

ಆ ಹಿನ್ನೆಲೆಯಲ್ಲಿ ಜಲಮಂಡಳಿ ಸಹಾಯಕ ಎಂಜಿನಿಯರ್‌ ಕಾರ್ತಿಕ್ ಮಂಜು ಸುನೀಲ್‌ ವಿರುದ್ಧ ಬಾಗಲಗುಂಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.