ಸಾರಾಂಶ
ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಕಳೆದ 4 ತಿಂಗಳಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡುವವರ ವಿರುದ್ಧ ದಾಖಲಿಸಿದ್ದ 61 ಪ್ರಕರಣಗಳ ಪೈಕಿ 29 ಪ್ರಕರಣಗಳಲ್ಲಿ ನ್ಯಾಯಾಲಯ ₹3.19 ಲಕ್ಷ ದಂಡ ವಿಧಿಸಿದೆ.
ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡಿದ ಸಂಬಂಧ 61 ಪ್ರಕರಣ ದಾಖಲಿಸಿದ್ದರು. ಈ ಪೈಕಿ 51 ಪ್ರಕರಣಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದವರನ್ನು ವಾಹನ ಸಮೇತ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಈ ಪೈಕಿ 29 ಪ್ರಕರಣಗಳಲ್ಲಿ ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿ ನ್ಯಾಯಾಲಯವು ₹3.19 ಲಕ್ಷ ದಂಡ ವಿಧಿಸಿ ಆದೇಶಿಸಿದೆ. ಜತೆಗೆ ಸಂಚಾರ ನಿಯಮ ಉಲ್ಲಂಘನೆಯ 9 ಪ್ರಕರಣಗಳಲ್ಲಿ ಆರೋಪಿಗಳಿಗೆ ₹42 ಸಾವಿರ ದಂಡ ವಿಧಿಸಿದೆ. ಉಳಿದ ಪ್ರಕರಣಗಳು ತನಿಖಾ ಹಂತದಲ್ಲಿವೆ. ಶೀಘ್ರದಲ್ಲೇ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗುವುದು. ಈಗಾಗಲೇ ದಂಡ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳಿಂದ ಇನ್ನು ಮುಂದೆ ಇಂತಹ ಕೃತ್ಯಗಳಲ್ಲಿ ತೊಡಗುವುದಿಲ್ಲ ಎಂದು ಮುಚ್ಚಳಿಕೆ ಬರೆಸಲಾಗಿದೆ ಎಂದು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನಿತಾ ಬಿ.ಹದ್ದಣ್ಣನವರ್ ತಿಳಿಸಿದ್ದಾರೆ.