ಸಾರಾಂಶ
ಮದ್ದೂರು : ವ್ಹೀಲಿಂಗ್ ಮಾಡಲು ಹೋಗಿ ಮೂವರು ಯುವಕರ ಪೈಕಿ ಇಬ್ಬರಿಗೆ ಕೈ-ಕಾಲು ಮುರಿದಿದ್ದು, ಒಬ್ಬನ ತಲೆಗೆ ತೀವ್ರ ಗಾಯಗಳಾಗಿರುವ ಘಟನೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಜರುಗಿದೆ. ಮದ್ದೂರು ಪಟ್ಟಣದ ಶಿವಪುರ ನಿವಾಸಿಗಳಾದ ಪ್ರಜ್ವಲ್, ಶಿವರಾಜ್ ಹಾಗೂ ಕುಮಾರ್ ಮೂವರು ಯುವಕರು.
ಶಿವಪುರದ ಹಳೇ ಬೆಂಗಳೂರು-ಮೈಸೂರು ರಾಷ್ಟ್ರಿಯ ಹೆದ್ದಾರಿ ಮೂಲಕ ಸೋಮನಹಳ್ಳಿಗೆ ತೆರಳುತ್ತಿದ್ದಾಗ ವ್ಹೀಲಿಂಗ್ ಮಾಡಲು ಹೋಗಿ ಪಲ್ಸರ್ ಬೈಕ್ ನಿಯಂತ್ರಣ ಕಳೆದುಕೊಂಡು ಪದ್ಮಾವತಿ ಕಲ್ಯಾಣ ಮಂಟಪದ ಮುಂಭಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿಬಿದ್ದಿದ್ದಾರೆ.
ಡಿಕ್ಕಿಯ ರಭಸಕ್ಕೆ ಪ್ರಜ್ವಲ್‌ನ ಕೈ, ಕುಮಾರನ ಕಾಲು ಹಾಗೂ ಶಿವರಾಜ್ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಮೂವರನ್ನು ಸಾರ್ವಜನಿಕರು ಹಾಗೂ ವಾಹನ ಸವಾರರು ಮದ್ದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಮದ್ದೂರು ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಮಂಡ್ಯ: ಪಾಂಡವಪುರ- ನಾಗನಹಳ್ಳಿ ರೈಲು ನಿಲ್ದಾಣದ ನಡುವೆ ರೈಲುಗಾಡಿಗೆ ಸಿಕ್ಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಗೆ ಸುಮಾರು 65 ವರ್ಷವಾಗಿದೆ. 5.6 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು, ಸಾಧಾರಣ ಮೈಕಟ್ಟು, ಅರ್ಧ ಇಂಚು ಉದ್ದದ ಬಿಳಿ ದಾಡಿ, ನೀಳವಾದ ಮೂಗು, ಮೈಮೇಲೆ ಕಪ್ಪು ಮತ್ತು ಬಿಳಿ ಬಣ್ಣದ ದೊಡ್ಡ ಚೌಕಳಿವಯಳ್ಳ ತುಂಬು ತೋಳಿನ ಶರ್ಟ, ಆಕಾಶ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ವಾರಸುದಾರರಿದ್ದಲ್ಲಿ ರೈಲ್ವೆ ಪೊಲೀಸ್ ಠಾಣೆ-08212516579 ಅನ್ನು ಸಂಪರ್ಕಿಸಬಹುದಂದು ಎಂದು ಮೈಸೂರು ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.