ಸಾರಾಂಶ
ಬೆಂಗಳೂರು : ಸಂಕಷ್ಟದಲ್ಲಿ ಸಿಲುಕಿ ನೆರವು ಕೋರಿ ಕರೆ ಮಾಡಿದಾಗ ತಾವಿದ್ದಲ್ಲಿಗೆ ಬರುವವರೆಗೆ ಪೊಲೀಸರ ಹೊಯ್ಸಳ ವಾಹನವನ್ನು ನಾಗರಿಕರು ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜಧಾನಿಯಲ್ಲಿ ಜಾರಿಗೆ ಬಂದಿದೆ.
ಅಲ್ಲದೆ ಹೊಯ್ಸಳ ವಾಹನಕ್ಕೂ ಕೂಡ ಸಂಕಷ್ಟಕ್ಕೆ ಸಿಲುಕಿದವರ ಲೈವ್ ಲೋಕೇಷನ್ ಲಭ್ಯವಿದ್ದು, ತ್ವರಿತವಾಗಿ ತೊಂದರೆಗೆ ತುತ್ತಾದವರಿಗೆ ಸಹಾಯ ಹಸ್ತ ಚಾಚಲು ಪೊಲೀಸರಿಗೂ ಈ ತಾಂತ್ರಿಕ ವ್ಯವಸ್ಥೆ ನೆರವಾಗಲಿದೆ. ಇದಕ್ಕಾಗಿ ನಮ್ಮ-122 (ಪೊಲೀಸ್ ನಿಯಂತ್ರಣ ಕೊಠಡಿ) ಹಾಗೂ ಅಪತ್ಭಾಂದವ (ಸೆಫ್ಟಿ ಐ ಲ್ಯಾಂಡ್) ಅನ್ನು ಉನ್ನತೀಕರಿಸಿ ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್ (ಕೆಎಸ್‌ಪಿ) ಆ್ಯಪ್‌ಗೆ ಲಿಂಕ್ ಮಾಡಲಾಗಿದೆ. ಜನರ ಸುರಕ್ಷತೆಗೆ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಹೇಗೆ ಕಾರ್ಯನಿರ್ವಹಣೆ?:
ನಗರ ವ್ಯಾಪ್ತಿ ಜನಿಬಿಡ ಹಾಗೂ ನಿರ್ಜನ 50 ಸ್ಥಳಗಳಲ್ಲಿ ಅಪತ್ಭಾಂದವ ಕೇಂದ್ರಗಳನ್ನು ತೆರೆಯಲಾಗಿದೆ. ತುರ್ತು ಸಂದರ್ಭಗಳು ಹಾಗೂ ಅಪಾಯ ಸನ್ನಿವೇಶಗಳು ಎದುರಾದರೆ ತಕ್ಷಣವೇ ಅಪತ್ಬಾಂಧವ ಕೇಂದ್ರಕ್ಕೆ ತೆರಳಿ ಅಲ್ಲಿ ನೀಡಿರುವ ಬಟನ್ ಒತ್ತಿದ ತಕ್ಷಣವೇ ಕಮಾಂಡ್ ಸೆಂಟರ್ ಸಂಪರ್ಕ ಸಿಗಲಿದೆ. ಆಗ ಕಮಾಂಡ್ ಸೆಂಟರ್ ಸಿಬ್ಬಂದಿ ಕರೆ ಸ್ವೀಕರಿಸಿ ಜನರ ದೂರು ಆಲಿಸುತ್ತಿದ್ದರು.
ದೂರು ಸ್ವೀಕರಿಸಿದ ಬಳಿಕ ಸಮೀಪದ ಹೊಯ್ಸಳಕ್ಕೆ ಕಮಾಂಡ್ ಸೆಂಟರ್ ದೂರು ರವಾನೆ ಮಾಡುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ಸಂತ್ರಸ್ತರಿಗೆ ನೆರವಾಗುತ್ತಿದ್ದರು. ಈ ವ್ಯವಸ್ಥೆಯನ್ನು ಮತ್ತಷ್ಟು ತಾಂತ್ರಿಕವಾಗಿ ಸುಧಾರಿಸಿರುವ ಪೊಲೀಸರು, ಇದೀಗ ಕೆಎಸ್‌ಪಿ ಆ್ಯಪ್‌ಗೆ ಅಪತ್ಫಾಂಧವ ಸಾಫ್ಟ್‌ವೇರ್ ಲಿಂಕ್ ಮಾಡಿದ್ದಾರೆ. ಬಟನ್ ಒತ್ತಿದ ಕೂಡಲೇ ಒಂದೇ ಸಮಯದಲ್ಲಿ ಕಮಾಂಡ್ ಸೆಂಟರ್‌ಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಕೆಎಸ್‌ಪಿ ಆ್ಯಪ್‌ಗೂ ಸಂಪರ್ಕ ಸಿಗಲಿದೆ. ಆನಂತರ ವಿಡಿಯೋ ಮತ್ತು ಆಡಿಯೋ ಮೂಲಕ ಕಮಾಂಡ್ ಸೆಂಟರ್‌ನ ಸಿಬ್ಬಂದಿ ಜೊತೆಗೆ ಜನರು ಆನ್‌ಲೈನ್‌ನಲ್ಲೇ ಮಾತನಾಡಿ ದೂರು ಸಲ್ಲಿಸಬಹುದು ಎಂದು ಆಯುಕ್ತರು ಹೇಳಿದ್ದಾರೆ.
ಗೂಗಲ್ ಪ್ಲೇಸ್ಟೋರಲ್ಲಿ ಕೆಎಸ್‌ಪಿ ಆ್ಯಪ್ ಲಭ್ಯ
ನಗರದ ಪ್ರಸುತ್ತ 50 ಕಡೆಗಳಲ್ಲಿ ಅಪತ್ಭಾಂದವ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅವುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ನಗರದ ನಾಗರಿಕರಿಗೆ ಗರಿಷ್ಠ ಮಟ್ಟದಲ್ಲಿ ಸುರಕ್ಷತೆ ಭಾವ ಮೂಡಿಸಲು ಕ್ರಮ ಜರುಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕೆಎಸ್‌ಪಿ ಆ್ಯಪ್‌ನಲ್ಲಿ ಸೇಫ್ ಕನೆಕ್ಟ್ ಬಟನ್ ಲಿಂಕ್ ಕೊಡಲಾಗಿದೆ. ದೇಶದಲ್ಲೇ ಈ ಮಾದರಿಯ ಸುರಕ್ಷತಾ ಸೇವೆಯನ್ನು ಬೆಂಗಳೂರಿನಲ್ಲಿ ಜಾರಿಗೊಳಿಸಲಾಗಿದೆ ಎಂದು ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಹೀಗಾಗಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಕೆಎಸ್‌ಪಿ ಆ್ಯಪ್ ಲಭ್ಯವಿದ್ದು, ನಾಗರಿಕರು ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಈ ಸುರಕ್ಷತಾ ವ್ಯವಸ್ಥೆಯನ್ನು ಸುದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ರಿಯಲ್ ಟೈಮ್ ಟ್ರ್ಯಾಂಕಿಂಗ್
ಹೊಯ್ಸಳ ಸೇವೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಸದ್ದುದ್ದೇಶದಿಂದ ರಿಯಲ್ ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ನಗರ ಪೊಲೀಸರು ಹೊಸದಾಗಿ ಪರಿಚಯಿಸಿದ್ದಾರೆ. ನಮ್ಮ-112 (ಪೊಲೀಸ್ ನಿಯಂತ್ರಣ ಕೊಠಡಿ)ಗೆ ಕರೆ ಮಾಡಿದಾಗ ದೂರು ಆಲಿಸುವ ಕಮಾಂಡ್ ಸೆಂಟರ್ ಸಿಬ್ಬಂದಿ, ತಕ್ಷಣವೇ ಈ ಬಗ್ಗೆ ಹೊಯ್ಸಳ ವಾಹನಕ್ಕೆ ಮಾಹಿತಿ ನೀಡಲಿದ್ದಾರೆ. ಆಗ ದೂರಿನ ಸಂಖ್ಯೆ ಹಾಗೂ ಟ್ರ್ಯಾಕಿಂಗ್ ಲಿಂಕ್ ಒಳಗೊಂಡ ಸಂದೇಶವು ದೂರದಾರನ ಮೊಬೈಲ್‌ಗೆ ತಕ್ಷಣವೇ ರವಾನಿಸಲಿದ್ದಾರೆ. ಆಗ ಆ ಸಂದೇಶ ಆಧರಿಸಿ ಹೊಯ್ಸಳ ವಾಹನದ ಟ್ರ್ಯಾಕಿಂಗ್ ಅನ್ನು ದೂರುದಾರರು ಪರಿಶೀಲಿಸಬಹುದು. ಇದೊಂದು ರೀತಿ ಉಬರ್, ಓಲಾ ಕ್ಯಾಬ್‌ಗಳನ್ನು ಬುಕ್ ಮಾಡಿ ಟ್ರ್ಯಾಕಿಂಗ್ ಮಾಡಿದಂತೆ. ಇದರಿಂದ ಹೊಯ್ಸಳ ವಾಹನ ಯಾವ ಸಮಯಕ್ಕೆ ಘಟನಾ ಸ್ಥಳ ತಲುಪಿದೆ ಎಂಬುದು ಜನರಿಂದಲೇ ಅಧಿಕಾರಿಗಳಿಗೆ ಗೊತ್ತಾಗಲಿದೆ.ಜನ ಸ್ನೇಹಿ ಪೊಲೀಸ್ ಆಡಳಿತ ಜಾರಿಗೊಳಿಸುವ ನಿಟ್ಟಿನಲ್ಲಿ ಈಗ ಹೊಯ್ಸಳ ವಾಹನ ಟ್ರ್ಯಾಕಿಂಗ್ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಪೊಲೀಸರ ಸೇವೆ ಪಡೆಯಲು ಕೆಎಸ್‌ಪಿ ಆ್ಯಪ್‌ನಲ್ಲಿ ನಾಗರಿಕರಿಗೆ ಲಿಂಕ್ ನೀಡಲಾಗಿದೆ. ಜನರ ರಕ್ಷಣೆಯೇ ನಮ್ಮ ಧ್ಯೇಯವಾಗಿದೆ. ನಗರದ ನಾಗರಿಕರಲ್ಲಿ ನಿರಾತಂಕದ ಭಾವನೆ ಇರಬೇಕು.
-ಬಿ.ದಯಾನಂದ್, ಪೊಲೀಸ್ ಆಯುಕ್ತ.