ಕನ್ನಡಪ್ರಭ ವಾರ್ತೆ ಬೆಂಗಳೂರು

ಮಗುವನ್ನು ಮಾರಾಟ ಮಾಡಿ ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ಆರೋಪಿಸಿ ದೂರು ನೀಡಿದ್ದ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ವಿವೇಕನಗರ ಠಾಣೆ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ್ದು, ಆಕೆ ಪತಿಯ ಕಿರುಕುಳದಿಂದ ಬೇಸತ್ತು ಮೂವರು ಮಕ್ಕಳೊಂದಿಗೆ ಮನೆ ತೊರೆದಿರುವುದು ಗೊತ್ತಾಗಿದೆ.

ಪತ್ನಿ ವಿರುದ್ಧ ಆರೋಪಿಸಿ ತಾವರೆಕೆರೆ ನಿವಾಸಿ ರವಿಬಾಬು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ರವಿಬಾಬು ಪತ್ನಿ ಮಕ್ಕಳೊಂದಿಗೆ ಸುರಕ್ಷಿತವಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾವರೆಕೆರೆ ನಿವಾಸಿ ರವಿಬಾಬು ಎಂಬುವವರು ನಗರದ ಆಸ್ಟಿನ್ ಟೌನ್ ನಿವಾಸಿ ಮಹಿಳೆಯನ್ನು 16 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಮನೆಯಲ್ಲಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ರವಿಬಾಬು ಪತ್ನಿ ತನ್ನ ಮೂವರು ಮಕ್ಕಳನ್ನು ಕರೆದುಕೊಂದು ತವರು ಮನೆಗೆ ಹೋಗಿದ್ದಾರೆ. ತನ್ನ ತವರು ಮನೆಯಲ್ಲಿಯೂ ಜಗಳವಾಗಿದ್ದರಿಂದ ಬೇಸತ್ತ ಮನೆ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿ ಒಂದು ಮಗುವನ್ನು ಮಾರಿ, ಕಾಣೆಯಾಗಿದ್ದಾಳೆಂದು ವಿವೇಕನಗರ ಪೊಲೀಸ್ ಠಾಣೆಗೆ ರವಿಬಾಬು ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಮಹಿಳೆ ಮತ್ತು ಮೂವರು ಮಕ್ಕಳು ಸುರಕ್ಷಿತವಾಗಿದ್ದು, ಗಂಡನ ಕಿರುಕುಳಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದಾಳೆ ಎಂಬುದು ಪೊಲೀಸ್‌ ಅಧಿಕಾರಿಗಳು ಗೊತ್ತಾಗಿದೆ.

ಪತಿಯ ವಿರುದ್ಧವೇ ಮಹಿಳೆ ಆರೋಪ:


ಪತಿ ರವಿಬಾಬುಗೆ ಬೇರೆ ಮಹಿಳೆಯರ ಜತೆ ಸಂಬಂಧವಿದೆ. ಆತ ಎರಡೆರಡು ಮೊಬೈಲ್‌ಗಳನ್ನು ಬಳಸುತ್ತಾನೆ. ಆತನ ಕಿರುಕುಳದಿಂದಲೇ ಮನೆಬಿಟ್ಟು ಬಂದಿರುವುದಾಗಿ ಮಹಿಳೆ ಹೇಳಿಕೆ ನೀಡಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.