ಸಾರಾಂಶ
ಬೆಂಗಳೂರು : ಪತಿಯ ಮದ್ಯ ವ್ಯಸನಕ್ಕೆ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರಪ್ರದೇಶದ ಪ್ರಯಾಗ್‌ರಾಜ್ ಮೂಲದ ಅಕ್ಷತಾ ಸಾಹು(23) ಮೃತ ದುರ್ದೈವಿ. ಗುರುವಾರ ತಡರಾತ್ರಿ ಮನೆಯ ಅಡುಗೆ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಉತ್ತರಪ್ರದೇಶ ಪ್ರಯಾಗ್‌ರಾಜ್ ಮೂಲದ ಅಕ್ಷತಾ ಸಾಹು, ಪತಿ ಧೀರಜ್ ಮತ್ತು 11 ತಿಂಗಳ ಮಗುವಿನೊಂದಿಗೆ ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮನೆಯ ಸಮೀಪವೇ ಪತಿ ಧೀರಜ್ ಪಾನಿಪೂರಿ ಅಂಗಡಿ ಇರಿಸಿಕೊಂಡಿದ್ದ. ಮದ್ಯ ವ್ಯಸನಿಯಾದ ಧೀರಜ್ ಕ್ಷುಲ್ಲಕ ಕಾರಣಗಳಿಗೆ ಆಗಾಗ ಪತ್ನಿ ಅಕ್ಷತಾ ಸಾಹುಗೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಗುರುವಾರ ರಾತ್ರಿ ಸಹ ಧೀರಜ್ ಮದ್ಯ ಸೇವಿಸಿ ಮನೆಗೆ ಬಂದಿದ್ದು, ಅಕ್ಷತಾ ಜತೆ ಜಗಳ ಮಾಡಿದ್ದ. ಬಳಿಕ ಧೀರಜ್ ಮತ್ತು ಮಗು ನಿದ್ದೆಗೆ ಜಾರಿದ ಬಳಿಕ ತಡರಾತ್ರಿ ಅಕ್ಷತಾ ಅಡುಗೆ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಪತಿ ಧೀರಜ್ ಎಚ್ಚರಗೊಂಡಾಗ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.