ಸಾರಾಂಶ
ಶ್ರೀರಂಗಪಟ್ಟಣ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಹಿನ್ನೆಲೆಯಲ್ಲಿ ಪತ್ನಿ, ಅತ್ತೆ ಹಾಗೂ ಭಾಮೈದನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದಲ್ಲಿ ನಡೆದಿದ್ದು, ತಾಲೂಕಿನ ಪಾಲಹಳ್ಳಿಯ ಲೇ.ಈಶ್ವರ್ ರಾವ್ ಪುತ್ರ ರವಿಕಿರಣ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಅಕ್ಕ ಲಕ್ಷ್ಮಿ ಅವರನ್ನು ಸುಮಾರು 15 ವರ್ಷಗಳ ಹಿಂದೆ ನಮ್ಮ ಗ್ರಾಮದ ಲೇ.ಬಾಲಚಂದ್ರ ಮತ್ತು ಕೃಷ್ಣವೇಣಿ ಅವರ ಪುತ್ರ ಶ್ರೀಕಾಂತ್‌ಗೆ ನಮ್ಮ ಹಿಂದೂ ಸಂಪ್ರಾದಾಯದಂತೆ ಮದುವೆ ಮಾಡಿಕೊಡಲಾಗಿತ್ತು. ನನ್ನ ಅಕ್ಕ ಮತ್ತು ಶ್ರೀಕಾಂತ್‌ಗೆ ಹೇಮಂತ್ ಮತ್ತು ಸುಮಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಸುಮಂತ್‌ಗೆ ಬ್ಲಡ್ ಕ್ಯಾನ್ಸರ್ ಇದೆ.
ನನ್ನ ಅಕ್ಕನ ಗಂಡ ಶ್ರೀಕಾಂತ್ ಮತ್ತು ಅವರ ಅಣ್ಣ ಹರೀಶ್, ತಮ್ಮ ಪ್ರಶಾಂತ್ ಅವರ ತಾಯಿ ಕೃಷ್ಣವೇಣಿ ಇವರು ಸುಮಾರು 4 ವರ್ಷದ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದು, ಶ್ರೀಕಾಂತ್- ಜಾನ್ ಎಂದು, ಅವರ ಅಣ್ಣ ಹರೀಶ್ ಪೀಟರ್ , ತಮ್ಮ ಪ್ರಶಾಂತ್ ಡೇವಿಡ್, ತಾಯಿ ಕೃಷ್ಣವೇಣಿ ಮೇರಿ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ.
ನಂತರ ನನ್ನ ಅಕ್ಕನಿಗೂ ಸಹ ಕಳೆದ 4 ವರ್ಷಗಳಿಂದ ಬಲವಂತವಾಗಿ ಮತಾಂತರವಾಗಲು ಬೆದರಿಕೆ ಹಾಕುತ್ತಿದ್ದಾರೆ. ಈ ವಿಷಯ ತಿಳಿದು ಭಾವ ಶ್ರೀಕಾಂತ್‌ಗೆ ಬುದ್ದಿವಾದ ಹೇಳಿದ್ದೆವು. ಬಳಿಕವೂ ಭಾವ ಶ್ರೀಕಾಂತ್ ಮತ್ತು ಕುಟುಂಬಸ್ಥರು ನನ್ನ ಅಕ್ಕನಿಗೆ ತವರು ಮನೆಯಿಂದ ಹಣ ತರಬೇಕು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಾನು ಸಾಲ ಮಾಡಿ ಸುಮಾರು 25 ಲಕ್ಷವನ್ನು ನಮ್ಮ ಭಾವನಿಗೆ ಕೊಟ್ಟಿದ್ದೇನೆ.
ನನ್ನಿಂದ ಹಣ ಪಡೆದು ಮಂಟಿಯಲ್ಲಿ ಒಂದು ಚರ್ಚ್ ಕಟ್ಟಿಸಿಕೊಂಡಿರುವ ಅಕ್ಕನ ಗಂಡ ಶ್ರೀಕಾಂತ್ ಹಲವರನ್ನು ಮತಾಂತರ ಮಾಡುತ್ತಿದ್ದಾರೆ. ನಮ್ಮ ಅಕ್ಕನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಕಾರಣ ದೈಹಿಕ, ಮಾನಸಿಕವಾಗಿ ಹಿಂಸೆ ನೀಡಿ ಹಲ್ಲೆ ಮಾಡಿದ್ದರು. ಇದರಿಂದ ಅಕ್ಕ ಮನೆ ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದರು. ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿತ್ತು. ನಂತರ ಕೆ.ಆರ್.ಎಸ್ ಡ್ಯಾಂ ಬಳಿ ಅಕ್ಕ ಪತ್ತೆಯಾಗಿದ್ದರು ಎಂದು ದೂರಿನಲ್ಲಿ ರವಿಕಿರಣ್ ತಿಳಿಸಿದ್ದಾರೆ.
ಏ.12ರಂದು ಪಟ್ಟಣದ ಮುಖ್ಯ ರಸ್ತೆಯ ರವಿಕುಮಾರ್ ಬಿನ್ ಲೇಟ್ ಗೋವಿಂದಪ್ಪರ ಮನೆಯಲ್ಲಿ ರಾಜಿ-ಪಂಚಾಯ್ತಿ ಮಾಡಲು ನಾನು, ನನ್ನ ಅಕ್ಕ ಮತ್ತು ನನ್ನ ತಾಯಿಯನ್ನು ಪೋನ್ ಮಾಡಿ ಕರೆಸಿಕೊಂಡರು. ನಂತರ ಅಕ್ಕನ ಗಂಡ ಶ್ರೀಕಾಂತ್ ಮತ್ತು ಅವರ ಅಣ್ಣ ಹರೀಶ್, ಅತ್ತಿಗೆ ನಾಗಿಣಿ, ತಮ್ಮ ಪ್ರಶಾಂತ್ ಅವರ ತಾಯಿ ಕೃಷ್ಣವೇಣಿ ಮತ್ತು ರವಿಕುಮಾರ್ ಅವರ ಮಗ ಸುಬ್ರಹ್ಮಣ್ಯ, ಪ್ರಭಾ ಸಾಗರ ಎಲ್ಲರೂ ಒಟ್ಟಾಗಿ ನನ್ನ ಅಕ್ಕ ಲಕ್ಷ್ಮಿ ಅವರನ್ನು ಕೊಲೆ ಮಾಡುವ ಅಥವಾ ಮತಾಂತರ ಮಾಡಲು ಕಬ್ಬಿಣದ ರಾಡ್‌ನಿಂದ ತಲೆಗೆ ಶ್ರೀಕಾಂತ್, ಹರೀಶ್ ಮತ್ತು ರವಿಕುಮಾರ್ ಅವರು ಹಲ್ಲೆ ಮಾಡಿದ್ದಾರೆ.
ಜೊತೆಗೆ ನಮ್ಮ ತಾಯಿ ಶೃತಿಗೆ ಸುಬ್ರಹ್ಮಣ್ಯ ಮತ್ತು ಕೃಷ್ಣವೇಣಿ ಮತ್ತು ನಾಗಿಣಿ ಅವರು ಬಲವಾಗಿ ಹೊಡೆದಿದ್ದು, ಬಿಡಿಸಲು ಹೋದಾಗ ಹರೀಶ್, ಸುಬ್ರಹ್ಮಣ್ಯ ಮತ್ತು ಪ್ರಭಾ ಅವರು ನನ್ನ ಬಲಗೈಗೆ ರಾಡ್‌ನಿಂದ ಹೊಡೆದಿದ್ದಾರೆ ಎಂದು ರವಿಕಿರಣ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಲಕ್ಷ್ಮಿ, ಶೃತಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಪಟ್ಟಣದ ಪೊಲೀಸರು ಶ್ರೀಕಾಂತ್, ಹರೀಶ್, ರವಿಕಿರಣ್, ಸುಬ್ರಹ್ಮಣ್ಯ, ಪ್ರಭಾ, ಪ್ರಶಾಂತ್, ನಾಗಿಣಿ, ಕೃಷ್ಣಕುಮಾರ್, ಸಾಗರ ಎಂಬುವವರ ವಿರುದ್ಧ ಐಪಿಸಿ ಸಕ್ಷನ್ 109(1), 351(2), 190 ಹಾಗೂ ಕರ್ನಾಟಕ ಧಾರ್ಮಿಕ ಸ್ವತಂತ್ರ್ಯ ಹಕ್ಕುಗಳ ಸಂರಕ್ಷಣೆ ಕಾಯ್ದೆ 2022(5) ರೀತ್ಯ ಪ್ರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹಿಂದೂ ಸಂಘಟನೆ ಸಾಥ್:
ಮತಾಂತರ ಘಟನೆ ಬಗ್ಗೆ ರವಿಕಿರಣ್ ಹಿಂದೂ ಸಂಘಟನೆಗೆ ಮಾಹಿತಿ ನೀಡಿದ್ದು, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಹಿಂದೂ ಸಂಘಟನೆಗಳ ಮುಖಂಡರು ಹಲ್ಲೆಗೊಳಗಾದವರಿಗೆ ಧೈರ್ಯ ಹೇಳಿ ರವಿಕಿರಣ್ ಜೊತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.