ರಸ್ತೆಯಲ್ಲಿ ವಾಹನ ಹಿಂದಿಕ್ಕುವ ವಿಚಾರವಾಗಿ ಸಿಟ್ಟಿಗೆದ್ದು ವಿಂಗ್ ಕಮಾಂಡರ್ - ಬೈಕ್ ಸವಾರ ಪರಸ್ಪರ ಬಡಿದಾಟ

| N/A | Published : Apr 22 2025, 01:47 AM IST / Updated: Apr 22 2025, 05:27 AM IST

Crime News
ರಸ್ತೆಯಲ್ಲಿ ವಾಹನ ಹಿಂದಿಕ್ಕುವ ವಿಚಾರವಾಗಿ ಸಿಟ್ಟಿಗೆದ್ದು ವಿಂಗ್ ಕಮಾಂಡರ್ - ಬೈಕ್ ಸವಾರ ಪರಸ್ಪರ ಬಡಿದಾಟ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆಯಲ್ಲಿ ವಾಹನ ಹಿಂದಿಕ್ಕುವ ವಿಚಾರವಾಗಿ ಸಿಟ್ಟಿಗೆದ್ದು ಭಾರತೀಯ ವಾಯು ದಳದ ವಿಂಗ್ ಕುಮಾಂಡರ್ ಹಾಗೂ ಬೈಕ್ ಸವಾರ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

 ಬೆಂಗಳೂರು :  ರಸ್ತೆಯಲ್ಲಿ ವಾಹನ ಹಿಂದಿಕ್ಕುವ ವಿಚಾರವಾಗಿ ಸಿಟ್ಟಿಗೆದ್ದು ಭಾರತೀಯ ವಾಯು ದಳದ ವಿಂಗ್ ಕುಮಾಂಡರ್ ಹಾಗೂ ಬೈಕ್ ಸವಾರ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಾಗೂ ಖಾಸಗಿ ಕಂಪನಿ ಉದ್ಯೋಗಿ ವಿಕಾಸ್ ಕುಮಾರ್‌ ಗಲಾಟೆ ಮಾಡಿಕೊಂಡಿದ್ದು, ಈ ಬಗ್ಗೆ ನೀಡಿರುವ ದೂರು-ಪ್ರತಿ ದೂರುಗಳ ಆಧರಿಸಿ ಎಫ್‌ಐಆರ್ ದಾಖಲಾಗಿದೆ. ಆದರೆ, ಕಾಲ್ ಸೆಂಟರ್ ಉದ್ಯೋಗಿ, ಬೈಯಪ್ಪನಹಳ್ಳಿ ಸಮೀಪದ ನಿವಾಸಿ ವಿಕಾಸ್‌ನನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ.

ಕೆಲಸದ ನಿಮಿತ್ತ ಕೊಲ್ಕತ್ತಾಕ್ಕೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 6.30ರ ವೇಳೆ ತಮ್ಮ ಪತ್ನಿ ಜತೆ ಶಿಲಾದಿತ್ಯ ಬೋಸ್ ಹೊರಟಿದ್ದರು. ಅದೇ ವೇಳೆ ಬೈಕ್‌ನಲ್ಲಿ ಖಾಸಗಿ ಕಂಪನಿ ಉದ್ಯೋಗಿ ವಿಕಾಸ್ ಬಂದಿದ್ದಾನೆ. ಆಗ ಮಾರ್ಗ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿ ಕೋಪದಲ್ಲಿ ಕೈ ಕೈ ಮೀಲಾಯಿಸಿದ್ದಾರೆ.

ಹಳೇ ಮದ್ರಾಸ್ ರಸ್ತೆಯ ಗ್ರ್ಯಾಂಡ್ ಗೋಪಾಲನ್‌ ಮಾಲ್ ಬಳಿ ವಿಂಗ್ ಕಮಾಂಡರ್ ಶಿಲಾದಿತ್ಯ ಹಾಗೂ ವಿಕಾಸ್ ಮಧ್ಯೆ ಗಲಾಟೆಯಾಗಿದೆ. ವಿಂಗ್ ಕಮಾಂಡ್ ನೀಡಿದ ದೂರಿನ ಮೇರೆಗೆ ವಿಕಾಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅದೇ ರೀತಿ ವಿಕಾಸ್ ಅವರ ದೂರಿನ್ವಯ ಸಹ ಶಿಲಾದಿತ್ಯ ಬೋಸ್ ಮತ್ತು ಅವರ ಪತ್ನಿ ಮಧುಮಿತಾ ದತ್ತು ದಂಪತಿ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

ಈ ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು, ವಿಂಗ್ ಕಮಾಂಡರ್ ಶಿಲಾದಿತ್ಯ ಮತ್ತು ವಿಕಾಸ್ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯಾವಳಿ ಪತ್ತೆಯಾಗಿವೆ. ಅಲ್ಲದೆ ಕೆಲ ಸ್ಥಳೀಯರು ಸಹ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ವಿಡಿಯೋಗಳು ಲಭ್ಯವಾಗಿವೆ ಎಂದು ಡಿಸಿಪಿ ಹೇಳಿದ್ದಾರೆ.

ಪತ್ನಿ ಕಾರು ಚಾಲನೆ:

ತಮ್ಮ ಕುಟುಂಬದ ಜತೆ ಸಿ.ವಿ.ರಾಮನ್‌ ನಗರದಲ್ಲಿ ಶಿಲಾದಿತ್ಯ ಬೋಸ್ ನೆಲೆಸಿದ್ದು, ಭಾರತೀಯ ವಾಯು ಸೇನೆಯಲ್ಲಿ ಕಮಾಂಡರ್ ಆಗಿದ್ದಾರೆ. ಅ‍ವರ ಪತ್ನಿ ಮಧುಮಿತಾ ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ (ಡಿಆರ್‌ಡಿಓ) ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕೆಲಸದ ನಿಮಿತ್ತ ಸೋಮವಾರ ಬೆಳಗ್ಗೆ ಕೊಲ್ಕತ್ತಾಕ್ಕೆ ಶಿಲಾದಿತ್ಯ ಹೋಗಬೇಕಿತ್ತು. ಹಾಗಾಗಿ ವಿಮಾನ ನಿಲ್ದಾಣಕ್ಕೆ ಬಸ್‌ನಲ್ಲಿ ತೆರಳಲು ಅವರನ್ನು ಬಸ್ ನಿಲ್ದಾಣಕ್ಕೆ ಬಿಡಲು ಬಂದ ಪತ್ನಿ ಮಧುಮಿತಾ ಕಾರು ಚಲಾಯಿಸುತ್ತಿದ್ದರು. ಎಡಭಾಗದಲ್ಲಿ ಶಿಲಾದಿತ್ಯ ಕುಳಿತಿದ್ದರು. ಆಗ ಹಳೇ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿ ಬಳಿ ಬೈಕ್‌ ಸವಾರ ವಿಕಾಸ್, ಶಿಲಾದಿತ್ಯ ಅ‍ವರ ಕಾರನ್ನು ಹಿಂದಿಕ್ಕಿ ಮುನ್ನುಗ್ಗಿದ್ದಾನೆ. ಅತಿವೇಗವಾಗಿ ಬೈಕ್ ಓಡಿಸುತ್ತಿದ್ದೀಯಾ ಎಂದು ಕಾರು ಚಾಲನೆ ಮಾಡುತ್ತಿದ್ದ ಮಧುಮಿತಾ ಆಕ್ಷೇಪಿಸಿದ್ದಾರೆ. ಈ ಮಾತಿಗೆ ಕೆರಳಿದ ವಿಕಾಸ್‌, ಕೂಡಲೇ ಬೈಕ್‌ನಿಂದಿಳಿದು ಬಂದು ಗಲಾಟೆ ಮಾಡಿದ್ದಾನೆ.

ಕಾಲಿನಿಂದ ಒದ್ದ ಕಮಾಂಡರ್‌:

ಈ ಹಂತದಲ್ಲಿ ರೊಚ್ಚಿಗೆದ್ದ ಶಿಲಾದಿತ್ಯ ಹಾಗೂ ವಿಕಾಸ್ ಅವರು ರಸ್ತೆಯಲ್ಲಿ ಮುಷ್ಠಿ ಕಾಳಗ ಮಾಡಿದ್ದಾರೆ. ಆಗ ಪತಿ ಪರವಾಗಿ ಮಧುಮಿತಾ ಸಹ ಜಗಳವಾಡಿದ್ದಾರೆ. ಗಲಾಟೆ ವೇಳೆ ಕೆಳಗೆ ಬಿದ್ದ ಬೈಕ್ ಸವಾರನಿಗೆ ಶಿಲಾದಿತ್ಯ ಕಾಲಿನಿಂದ ಒದ್ದು ರೋಷ ತೋರಿಸಿದರೆ, ಇದಕ್ಕೆ ಪ್ರತಿಯಾಗಿ ವಿಂಗ್ ಕಮಾಂಡರ್‌ಗೆ ಬೈಕ್‌ನಿಂದ ಗುದ್ದಿ ವಿಕಾಸ್ ಗಾಯಗೊಳಿಸಿದ್ದಾನೆ. ಆಗ ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಗಲಾಟೆ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೂರ್ವನಿಗದಿತ ಕಾರ್ಯಕ್ರಮದಂತೆ ಶಿಲಾದಿತ್ಯ ಹೊರಟಿದ್ದಾರೆ. ಬಳಿಕ ಬೈಯಪ್ಪನಹಳ್ಳಿ ಠಾಣೆಗೆ ಅವರ ಪತ್ನಿ ಮಧುಮಿತಾ ತೆರಳಿ ದೂರು ದಾಖಲಿಸಿದ್ದಾರೆ. ಅಂತೆಯೇ ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಬೈಕ್ ಸವಾರ ವಿಕಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡದವರ ಜಾಗವೆಂದು ಬೆದರಿಸಿದರು: ಶಿಲಾದಿತ್ಯ

ಇದು ಕನ್ನಡದವರ ಜಾಗ. ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಆರೋಪಿಸಿದ್ದಾರೆ. ನನ್ನ ತಂದೆ ಶಸ್ತ್ರ ಚಿಕಿತ್ಸೆ ಸಲುವಾಗಿ ಕೊಲ್ಕತ್ತಾಗೆ ತೆರಳಬೇಕಿತ್ತು. ಹಾಗಾಗಿ ಬೆಳಗ್ಗೆ ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಿಡಲು ಪತ್ನಿ ಬಂದಿದ್ದರು. ಆಗ ನಮ್ಮ ಕಾರಿಗೆ ಬೈಕ್ ಗುದ್ದಿಸುವಂತೆ ಅತಿವೇಗವಾಗಿ ಬಂದ ಬೈಕ್ ಸವಾರನ ವರ್ತನೆಗೆ ಆಕ್ಷೇಪಿಸಿದ್ದೇವೆ. ಇದಕ್ಕೆ ಸಿಟ್ಟಿಗೆದ್ದು ಆತ ಗಲಾಟೆ ಮಾಡಿದ. ಕಾರಿನ ಕಿಟಕಿ ಬಳಿ ಬಂದು ಅವಾಚ್ಯವಾಗಿ ನಿಂದಿಸಿ ಏಕಾಏಕಿ ಹಲ್ಲೆ ನಡೆಸಿದ. ಗಲಾಟೆ ವೇಳೆ ನನ್ನ ನೆರವಿಗೆ ಸಾರ್ವಜನಿಕರು ಬರಲಿಲ್ಲ ಎಂದು ತಿಳಿಸಿದ್ದಾರೆ.

ಘಟನೆಗೂ ಭಾಷೆಗೂ ಸಂಬಂಧವಿಲ್ಲ: ಡಿಸಿಪಿ

ಇದೊಂದು ರೇಡ್ ರೋಜ್ ಗಲಾಟೆ. ಈ ಘಟನೆಗೂ ಭಾಷೆಗೂ ಸಂಬಂಧವಿಲ್ಲ ಎಂದು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಸ್ಪಷ್ಟಪಡಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಾಕಷ್ಟು ಪುರಾವೆಗಳು ಸಿಕ್ಕಿವೆ. ರಸ್ತೆಯಲ್ಲಿ ಎದುರಿನಿಂದ ಬಂದ ಬೈಕ್ ಸವಾರನಿಗೆ ಕಾರು ಚಾಲನೆ ಮಾಡುತ್ತಿದ್ದ ವಿಂಗ್ ಕಮಾಂಡರ್ ಪತ್ನಿ ಮಧುಮಿತಾ ಆಕ್ಷೇಪಿಸಿದ್ದಾರೆ. ಆಗ ಕಾರಿನಲ್ಲಿದ್ದ ವಿಂಗ್ ಕಮಾಂಡರ್ ಹಾಗೂ ಬೈಕ್ ಸವಾರನ ಮಧ್ಯೆ ಜಗಳವಾಗಿದೆ. ಕ್ಷುಲ್ಲಕ ಕಾರಣಗಳಿಗೆ ರಸ್ತೆಯಲ್ಲಿ ಸಣ್ಣಪುಟ್ಟ ಗಲಾಟೆಗಳು ಸರ್ವೆ ಸಾಮಾನ್ಯ ಸಂಗತಿಯಾಗಿವೆ. ಇದಕ್ಕೆಲ್ಲ ಭಾಷೆಯನ್ನು ಮುಂದಿಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬೈಕ್‌ ಸವಾರನ ಪರ ನಿಂತ ಕನ್ನಡಪರ ಸಂಘಟನೆಗಳು:

ಹೊರ ರಾಜ್ಯದವರು ಪದೇ ಪದೇ ಕನ್ನಡಿಗರ ಮೇಲೆ ವಿನಾಕಾರಣ ಹಲ್ಲೆ ಮಾಡುತ್ತಿದ್ದು, ರಾಜ್ಯದವರ ಮೇಲೆಯೇ ಸುಳ್ಳು ಆರೋಪ ಮಾಡುತ್ತಾರೆ. ಈ ಘಟನೆಯಲ್ಲಿ ಬೈಕ್ ಸವಾರ ವಿಕಾಸ್‌ ಅವರ ಮೇಲೆ ಕಮಾಂಡರ್‌ ಹಲ್ಲೆ ಮಾಡಿದ್ದನ್ನು ಕನ್ನಡಪರ ಸಂಘಟನೆಗಳು ಖಂಡಿಸುತ್ತವೆ. ಕಾನೂನು ಹೋರಾಟಕ್ಕೆ ವಿಕಾಸ್‌ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಕರವೇ ಮಾಧ್ಯಮ ವಿಭಾಗದ ಮುಖ್ಯಸ್ಥ ಅರುಣ್ ಜಾವಗಲ್‌ ಹೇಳಿದ್ದಾರೆ.

ಅನುಕಂಪ ಗಿಟ್ಟಿಸಲು ಕಮಾಂಡರ್ ಯತ್ನ:

ಈ ಘಟನೆ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ವಿಂಗ್ ಕಮಾಂಡರ್ ಶಿಲಾದಿತ್ಯ ಹರಿಬಿಟ್ಟಿದ್ದರು. ಅದರಲ್ಲಿ ಬೈಕ್ ಸವಾರನ ಮೇಲೆ ಆರೋಪಗಳನ್ನು ಮಾಡಿದ್ದ ಅವರು, ತಾವು ಬಹಳ ಮುಗ್ಧ ಎನ್ನುವಂತೆ ಬಿಂಬಿಸಿಕೊಂಡಿದ್ದರು. ಜತೆಗೆ ಕನ್ನಡ ಭಾಷೆಯನ್ನು ಎಳೆದು ತಂದಿದ್ದರು. ಆದರೆ, ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳು ಬೇರೆ ಕತೆಯನ್ನೇ ಹೇಳಿದ್ದವು.