ಜಾಲತಾಣಗಳಲ್ಲಿ ಹಳೇ ವಿಡಿಯೋ ಶೇರ್ ಮಾಡಿದ್ದ ಮಹಿಳೆ ಬಂಧನ

| Published : Sep 21 2025, 02:00 AM IST

ಸಾರಾಂಶ

ಎರಡು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದಿದ್ದ ಗಲಾಟೆ ಕೃತ್ಯವನ್ನು ಬೆಂಗಳೂರಿನಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸುಳ್ಳು ಸುದ್ದಿ ಪ್ರಚಾರ ಮಾಡಿದ ತಪ್ಪಿಗೆ ಮಹಿಳೆಯೊಬ್ಬಳನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿ ಬಳಿಕ ಠಾಣಾ ಜಾಮೀನು ಮೇರೆಗೆ ಶನಿವಾರ ಬಿಡುಗಡೆಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಂಜಾನಪುರದ ನಿವಾಸಿ ಶಹಜಾಹನ್ ವಿವಾದಕ್ಕೀಡಾಗಿದ್ದು, ಇನ್‌ಸ್ಟಾಗ್ರಾಂ ತನ್ನ ‘ಸೋನು ದಿ ಸಂಚಾರಿ’ ಖಾತೆಯಲ್ಲಿ ಬೆಂಗಳೂರಿನಲ್ಲಿ ಪುಂಡಾಟಿಕೆ ಎಂದು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಪೊಲೀಸರು ಪರಿಶೀಲಿಸಿದಾಗ ಸುಳ್ಳು ಸುದ್ದಿ ಎಂಬುದು ಗೊತ್ತಾಗಿದೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇರೆಗೆ ಆಕೆಯ ವಿರುದ್ಧ ಪುಲಿಕೇಶಿನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ನಂತರ ಈ ಕುಚೇಷ್ಟೆ ಮತ್ತೆ ಮಾಡದಂತೆ ಎಚ್ಚರಿಕೆ ನೀಡಿ ಪೊಲೀಸರು ಠಾಣಾ ಜಾಮೀನು ಮಂಜೂರು ಮಾಡಿದ್ದಾರೆ. ಅಲ್ಲದೆ ಆರೋಪಿ ಸಹ ತಪ್ಪೊಪ್ಪಿಗೆ ಹೇಳಿಕೆಯನ್ನು ಸಹ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌. ಪುರ ತಾಲೂಕಿನ ಶಹಜಾಹನ್‌, ಅಂಜಾನಪುರದಲ್ಲಿ ನೆಲೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಆಕೆ, ಕೆಲ ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಕಿಡಿಗೇಡಿಗಳ ಗಲಾಟೆ ವಿಡಿಯೋವನ್ನು ಫೇಸ್‌ ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಶೇರ್ ಮಾಡಿದ್ದರು. ಅಲ್ಲದೆ ಅದಕ್ಕೆ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಎಂದು ಬರೆದಿದ್ದರು. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಅದರ ಸತ್ಯಾಸತ್ಯತೆ ಪರಿಶೀಲಿಸಿದಾಗ ಅಸಲಿ ಸಂಗತಿ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.