ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಸ್ತು ದೋಷ ನಿವಾರಣೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಜ್ಯೋತಿಷಿ ವಿರುದ್ಧ ಆರೋಪಿಸಿ ಗೋವಿಂದರಾಜನಗರ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುಳ್ಳು ಆರೋಪ ಹೊರಿಸಿ ಹಣ ಸುಲಿಗೆ ಮಹಿಳೆ ಹಾಗೂ ಆಕೆಯ ತಂಡ ಯತ್ನಿಸಿದೆ ಎಂದು ಆ ಜ್ಯೋತಿಷಿ ಸಹ ದೂರು ನೀಡಿದ್ದಾರೆ.ಈ ಎರಡು ದೂರು ಆಧರಿಸಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಮಹಿಳೆ ಹಾಗೂ ಜ್ಯೋತಿಷಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಜ್ಯೋತಿಷಿ ಮೇಲೆ ಆಪಾದನೆ: ಮನೆ ವಾಸ್ತು ದೋಷ ಸಂಬಂಧ ಸಲಹೆ ಕೇಳಲು ಏ.14 ರಂದು ವಿಜಯನಗರದ ಸಮೀಪದ ''''ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್’ ಗೆ ತೆರಳಿದ್ದೆ. ಆಗ ತನ್ನೊಂದಿಗೆ ಜ್ಯೋತಿಷಿ ಶಾಂತಕುಮಾರ್ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆ ಕಚೇರಿಯಲ್ಲಿದ್ದ ಅವರ ಪತ್ನಿ ಹಾಗೂ ಸಿಬ್ಬಂದಿ ದೌರ್ಜನ್ಯ ನಡೆಸಿದರು ಎಂದು ಮಹಿಳೆ ಆಪಾದಿಸಿದ್ದಾರೆ.ವಾಸ್ತು ಸಲಹೆ ನೀಡಲು 15 ಸಾವಿರ ರು. ಹಣ ಪಡೆದಿದ್ದಾರೆ. ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ ಜ್ಯೋತಿಷಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಣ ಕೊಡದಕ್ಕೆ ಸುಳ್ಳು ಆರೋಪ:ಜ್ಯೋತಿಷಿ
ವಾಸ್ತು ದೋಷ ನಿವಾರಣೆ ನೆಪದಲ್ಲಿ ನನ್ನನ್ನು ಮೂವರು ಅಪರಿಚಿತರು ಭೇಟಿಯಾದರು. ಆ ವೇಳೆ ಹಣ ನೀಡುವಂತೆ ಅವರು ಬೇಡಿಕೆ ಇಟ್ಟರು. ನಾನು ನಿರಾಕರಿಸಿದಾಗ ಮರ್ಯಾದೆ ಕಳೆಯುವುದಾಗಿ ಬೆದರಿಕೆ ಹಾಕಿದರು. ಈ ಬೆದರಿಕೆಗೆ ಬಗ್ಗದೆ ಹೋದಾಗ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೆ ನನ್ನ ಮೇಲೆ ಮಹಿಳೆ ಹಾಗೂ ಆಕೆಯ ಇಬ್ಬರು ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಜ್ಯೋತಿಷಿ ಶಾಂತಕುಮಾರ್ ದೂರಿದ್ದಾರೆ.
-ಹಣ ಕೊಡದಕ್ಕೆ ಮಹಿಳೆಯಿಂದಲೇ ಹಲ್ಲೆ: ಜ್ಯೋತಿಷಿ ಪ್ರತಿ ದೂರು-ಎರಡು ದೂರುಗಳನ್ನು ಆಧರಿಸಿ ಎಫ್‌ಐಆರ್ ದಾಖಲು-ಮಹಿಳೆ, ಜ್ಯೋತಿಷಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್