ಜಲಮಂಡಳಿಯ ಪೈಪ್‌ಗೆ ಅಕ್ರಮವಾಗಿ ಮೋಟರ್‌ : ನೀರು ತರಲು ಹೋದ ಮಹಿಳೆ ವಿದ್ಯುತ್‌ ಪ್ರವಹಿಸಿ ಸಾವು

| N/A | Published : Mar 14 2025, 01:32 AM IST / Updated: Mar 14 2025, 04:12 AM IST

ಸಾರಾಂಶ

ಜಲಮಂಡಳಿಯ ಪೈಪ್‌ಗೆ ಅಕ್ರಮವಾಗಿ ಅಳ‍ವಡಿಸಿಕೊಂಡಿದ್ದ ನೀರಿನ ಮೋಟರ್‌ ಆನ್‌ ಮಾಡುವಾಗ ವಿದ್ಯುತ್‌ ಪ್ರವಹಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು :   ಜಲಮಂಡಳಿಯ ಪೈಪ್‌ಗೆ ಅಕ್ರಮವಾಗಿ ಅಳ‍ವಡಿಸಿಕೊಂಡಿದ್ದ ನೀರಿನ ಮೋಟರ್‌ ಆನ್‌ ಮಾಡುವಾಗ ವಿದ್ಯುತ್‌ ಪ್ರವಹಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರು ರಸ್ತೆಯ ವಿನಾಯಕ ಚಿತ್ರಮಂದಿರ ಹಿಂಭಾಗದ ಆನಂದಪುರ ನಿವಾಸಿ ಸೆಲ್ವಿ(59) ಮೃತ ದುರ್ದೈವಿ. ಗುರುವಾರ ಮುಂಜಾನೆ ಸುಮಾರು 4.30ಕ್ಕೆ ಈ ದುರ್ಘಟನೆ ನಡೆದಿದೆ. ಮೃತ ಸೆಲ್ವಿಗೆ ಪತಿ 12 ವರ್ಷದ ಹಿಂದೆ ಮೃತಪಟ್ಟಿದ್ದು, ಇವರಿಗೆ ನಾಲ್ವರು ಮಕ್ಕಳು ಇದ್ದಾರೆ. ಮನೆಗೆಲಸ ಮಾಡಿಕೊಂಡು ಸೆಲ್ವಿ ಜೀವನ ದೂಡುತ್ತಿದ್ದರು.

ಇಲ್ಲಿರುವ ಬಹುತೇಕ ಮನೆಗಳಿಗೆ ನೀರಿನ ಸಂಪರ್ಕ ಇಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಬೆಂಗಳೂರು ಜಲಮಂಡಳಿಯ ದೊಡ್ಡ ನೀರಿನ ಪೈಪ್‌ನಿಂದ ಅಕ್ರಮವಾಗಿ ಸಂಪರ್ಕ ಪಡೆದು ಮೋಟರ್‌ ಅಳವಡಿಸಿಕೊಂಡಿದ್ದಾರೆ. ಮೋಟರ್‌ ಆನ್‌ ಮಾಡಿಕೊಂಡು ಟ್ಯಾಂಕ್‌ಗಳಿಗೆ ನೀರು ತುಂಬಿಸಿಕೊಂಡು ಬಳಸುತ್ತಾರೆ. ಅದರಂತೆ ಸೆಲ್ವಿ ಅವರು ಸಹ ಜಲಮಂಡಳಿ ನೀರಿನ ಪೈಪ್‌ಗೆ ಅಕ್ರಮವಾಗಿ ಮೋಟರ್‌ ಅಳವಡಿಸಿಕೊಂಡಿದ್ದರು. ಮುಂಜಾನೆ ಸುಮಾರು 4.30ಕ್ಕೆ ನೀರಿಗಾಗಿ ಮೋಟರ್‌ ಆನ್‌ ಮಾಡಿದಾಗ ವಿದ್ಯುತ್‌ ಪ್ರವಹಿಸಿದ ಪರಿಣಾಮ ಸೆಲ್ವಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಈಗಾಗಲೇ ಸೆಲ್ವಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.