ಸಾರಾಂಶ
ಮದ್ದೂರು : ಕೆಲಸದ ಒತ್ತಡದಿಂದ ಬೇಸತ್ತ ಎಂಜಿನಿಯರ್ ನೀರಿನ ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ಕುರುಬರ ದೊಡ್ಡಿ ಗ್ರಾಮದಲ್ಲಿ ಶನಿವಾರ ಮುಂಜಾನೆ ಜರುಗಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹೆಮ್ಮತಿ ಗ್ರಾಮದ ಜ್ಞಾನೇಶ್ (30) ಆತ್ಮಹತ್ಯೆಗೆ ಶರಣಾದ ಎಂಜಿನಿಯರ್.ತಾಲೂಕಿನ ಹೆಬ್ಬೆರಳು ಗ್ರಾಮ ಸಮೀಪದಲ್ಲಿ ಶಿಂಷಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಗುತ್ತಿಗೆ ಪಡೆದಿರುವ ಮೈಸೂರಿನ ಬಾಪೂಜಿ ಇನ್ಸ್ ಟ್ರಕ್ಷನ್ಸ್ ಕಂಪನಿಯಲ್ಲಿ ಜ್ಞಾನೇಶ ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡು ಕೆಸ್ತೂರು ಗ್ರಾಮದಲ್ಲಿ ವಾಸವಾಗಿದ್ದರು.
ಅವಿವಾಹಿತರಾಗಿದ್ದ ಈತ ಶನಿವಾರ ಮುಂಜಾನೆ ಕಾಮಗಾರಿ ಸ್ಥಳಕ್ಕೆ ಆಗಮಿಸಿ ತಮ್ಮ ಮೊಬೈಲ್ ವಾಟ್ಸಾಪ್ ಮೂಲಕ ವರ್ಕ್ ಪ್ರೆಶರ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖ ಮಾಡಿದ ನಂತರ ನೀರಿನ ಟ್ಯಾಂಕ್ ಏರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಜಿನಿಯರ್ ಜ್ಞಾನೇಶ್ ಆತ್ಮಹತ್ಯೆ ಬಗ್ಗೆ ಸುದ್ದಿ ತಿಳಿದ ಈತನ ಚಿಕ್ಕಪ್ಪ ಜ್ಞಾನೇಶ್ ಸಾವಿಗೆ ಬಾಪೂಜಿ ಕಂಪನಿ ಮಾಲೀಕರೇ ಕಾರಣರಾಗಿದ್ದಾರೆ. ಸ್ಥಳಕ್ಕೆ ಧಾವಿಸಿ ಮೃತನ ಸಾವಿಗೆ ಸೂಕ್ತ ಪರಿಹಾರ ನೀಡುವವರೆಗೆ ಶವವನ್ನು ಇಲ್ಲಿಂದ ಸಾಗಿಸಿ ಶವ ಪರೀಕ್ಷೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ನಡೆಸಿದರು.
ನಂತರ ಸ್ಥಳದಲ್ಲಿದ್ದ ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಅವರು ಕುಟುಂಬದವರನ್ನು ಮನವೊಲಿಸಿದ ನಂತರ ಜ್ಞಾನೇಶ್ ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಂಜೆ ಸಾಗಿಸಲಾಯಿತು.
ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಪಾದಚಾರಿ ಸಾವು
ಮಳವಳ್ಳಿ: ತಾಲೂಕಿನ ರಾವಣಿ ಗ್ರಾಮದ ಬಳಿ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಪಾದಚಾರಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮಳವಳ್ಳಿ-ಪೂರಿಗಾಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಮಾರು 52 ವರ್ಷದ ಅಪರಿಚಿತ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.