₹30 ಲಕ್ಷದ ಚಿನ್ನ ಕದ್ದು ದರೋಡೆ ಕತೆ ಹೆಣೆದ ಕೆಲಸದಾಳು ಬಂಧನ; ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿ ಕೃತ್ಯ!

| Published : Jan 31 2024, 02:17 AM IST

₹30 ಲಕ್ಷದ ಚಿನ್ನ ಕದ್ದು ದರೋಡೆ ಕತೆ ಹೆಣೆದ ಕೆಲಸದಾಳು ಬಂಧನ; ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿ ಕೃತ್ಯ!
Share this Article
  • FB
  • TW
  • Linkdin
  • Email

ಸಾರಾಂಶ

₹30 ಲಕ್ಷದ ಚಿನ್ನ ಕದ್ದು ದರೋಡೆ ಕತೆ ಹೆಣೆದ ಕೆಲಸದಾಳು ಬಂಧನ; ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿ ಕೃತ್ಯ

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿ ಬಳಿಕ ದರೋಡೆ ನಡೆದಿದೆ ಎಂದು ಸುಳ್ಳಿನ ಕತೆ ಹೆಣೆದಿದ್ದ ಮನೆ ಕೆಲಸದಾಕೆಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಶಾಂತಾ ಬಂಧಿತಳಾಗಿದ್ದು, ಆರೋಪಿಯಿಂದ ₹30 ಲಕ್ಷ ಮೌಲ್ಯದ 523 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಉದ್ಯಮಿ ಮಾರುತಿ ಪ್ರಸನ್ನ ದಂಪತಿ ವಿದೇಶ ಪ್ರವಾಸಕ್ಕೆ ತೆರಳಿದ್ದಾಗ ಕಳ್ಳತನ ಕೃತ್ಯ ನಡೆದಿತ್ತು. ಈ ಬಗ್ಗೆ ಶಂಕೆ ಮೇರೆಗೆ ಮನೆ ಕೆಲಸದಾಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.

ಆಯಿಲ್ ಬ್ಯುಸಿನೆಸ್ ಹೊಂದಿರುವ ಮಾರುತಿ ಪ್ರಸನ್ನ, ಆರ್‌ಎಂವಿ ಬಡಾವಣೆ 6ನೇ ಅಡ್ಡರಸ್ತೆಯಲ್ಲಿ ತಮ್ಮ ಪತ್ನಿ ಹಾಗೂ ಮೂವರು ಮಕ್ಕಳ ಜತೆ ನೆಲೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರ ಮನೆಯಲ್ಲಿ ಶಾಂತ ಕೆಲಸಕ್ಕಿದ್ದಳು. ಅದೇ ಮನೆಯ ಮಹಡಿಯಲ್ಲಿ ಪ್ರತ್ಯೇಕವಾಗಿ ಶಾಂತಾ ಕುಟುಂಬ ವಾಸ ನೆಲೆಸಿತ್ತು.

ಜ.17ರಂದು ಮಾರುತಿ ಅವರು ತಮ್ಮ ಪತ್ನಿ ಜತೆ ಥೈಲ್ಯಾಂಡ್‌ ಪ್ರವಾಸಕ್ಕೆ ತೆರಳಿದ್ದರು. ಆ ವೇಳೆ ಮನೆ ಮಾಲೀಕರ ಇಬ್ಬರು ಮಕ್ಕಳು ಹೊರತುಪಡಿಸಿದರೆ ಶಾಂತಾ ಹಾಗೂ ಆಕೆಯ ಮಕ್ಕಳು ಮಾತ್ರ ಇದ್ದರು. ಗಣರಾಜ್ಯೋತ್ಸವ ದಿನ ಮಾರುತಿ ಅವರ ಮಕ್ಕಳು ಸ್ನೇಹಿತರ ಮನೆಗೆ ಹೋಗಿ ರಾತ್ರಿ ಮನೆಗೆ ಬಂದಿದ್ದರು. ಮರುದಿನ ಮಾಲಿಕರ ಮಕ್ಕಳಿಗೆ ಶಾಂತಾ, ನೀವು ಮನೆಯಲ್ಲಿ ಇಲ್ಲದ ವೇಳೆ ಅಪರಿಚಿತ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾದ ಎಂದಿದ್ದಳು.

ವಿದೇಶದಿಂದ ಮಾರುತಿ ಅವರು ಮರಳಿ ಬಂದ ಬಳಿಕ ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಸಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, ಮನೆಕೆಲಸದಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಸಿಸಿಟಿವಿ ಸಂಪರ್ಕ ಕಡಿತಗೊಳಿಸಿ ಆಕೆ ಚಿನ್ನಾಭರಣ ದೋಚಿದ್ದಳು. ತಾನು ಸಿಕ್ಕಿ ಬೀಳುವ ಭಯದಿಂದ ದರೋಡೆ ನಡೆದಿದೆ ಎಂದು ಆಕೆ ಸುಳ್ಳು ಹೇಳಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.