ಲಿವ್‌-ಇನ್ ರಿಲೇಷನ್​​ಶಿಪ್​​ನಲ್ಲಿದ್ದ ಮಹಿಳೆಯನ್ನು ಕೊಂದು ಬಳಿಕ ವ್ಯಕ್ತಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರದ ಮನೆಯೊಂದರಲ್ಲಿ ನಡೆದಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಲಿವ್‌-ಇನ್ ರಿಲೇಷನ್​​ಶಿಪ್​​ನಲ್ಲಿದ್ದ ಮಹಿಳೆಯನ್ನು ಕೊಂದು ಬಳಿಕ ವ್ಯಕ್ತಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರದ ಮನೆಯೊಂದರಲ್ಲಿ ನಡೆದಿದೆ.

ತುಮಕೂರು ಮೂಲದ ಲಲಿತಾ (49) ಕೊಲೆಯಾದವರು. ಹೈದಾರಾಬಾದ್‌ ಮೂಲದ ಲಕ್ಷ್ಮಿ ನಾರಾಯಣ (51) ಆತ್ಮಹತ್ಯೆಗೆ ಶರಣಾದವರು.

ಇಬ್ಬರೂ ಪೀಣ್ಯದ ಕಾರ್ಖಾನೆಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಇಬ್ಬರು ಮದ್ಯ ಸೇವಿಸಿದ್ದು, ಸ್ವಲ್ಪ ಸಮಯದ ನಂತರ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಆಕ್ರೋಶಗೊಂಡ ಲಕ್ಷ್ಮಿನಾರಾಯಣ ಲಲಿತಾಳನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತಿಯ ಮರಣದ ನಂತರ ಲಲಿತಾ ಅವರು ಲಕ್ಷ್ಮಿನಾರಾಯಣ ಜತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಲಕ್ಷ್ಮಿ ನಾರಾಯಣ ಕೂಡ ತನ್ನ ಪತ್ನಿಯಿಂದ ದೂರವಾಗಿದ್ದ. ಇಂದಿರಾ ಪ್ರಿಯದರ್ಶಿನಿ ಲೇಔಟ್‌ನ ಬಾಡಿಗೆ ಮನೆಯಲ್ಲಿ‌ ಇಬ್ಬರು ಒಟ್ಟಿಗೆ ಸಹಜೀವನ ನಡೆಸುತ್ತಿದ್ದರು.

ಮಂಗಳವಾರ ಬೆಳಗ್ಗೆ ಎಷ್ಟು ಹೊತ್ತಾದರೂ ಮನೆಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಬಾಗಿಲು ತೆರೆದು ನೋಡಿದ್ದಾಗ ಇಬ್ಬರು ಮೃತಪಟ್ಟಿರುವುದು ಕಂಡು ಬಂದಿದೆ. ಅವರು ಈ ಬಗ್ಗೆ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಕೂಡಲೇ 112 ಗೆ ಕರೆ ಮಾಡಿದ್ದು, ಸ್ಥಳಕ್ಕೆ ರಾಜಗೋಪಾಲನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇಬ್ಬರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುಮಾನ ವ್ಯಕ್ತಪಡಿಸಿ ಹತ್ಯೆ:

ಲಲಿತಾ ನಡತೆ ಬಗ್ಗೆ ಲಕ್ಷ್ಮಿನಾರಾಯಣ ಅನುಮಾನ ವ್ಯಕ್ತಪಡಿಸಿ, ಆಕೆಯೊಂದಿಗೆ ಗಲಾಟೆ ಮಾಡಿದ್ದಾನೆ. ಇದೇ ವೇಳೆ ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಕೋಪದಲ್ಲಿ ಲಕ್ಷ್ಮಿ ನಾರಾಯಣ, ವೇಲ್‌ನಿಂದ ಲಲಿತಾಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.