ಸಾರಾಂಶ
ಸಚಿವ ಪ್ರಿಯಾಂಕ್ ಖರ್ಗೆ ಹೆಸರು ತಳುಕು ಹಾಕಿಕೊಂಡ ಕಾರಣಕ್ಕೆ ತೀವ್ರ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ಯುವ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣ ಕುರಿತು ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದ ರಾಜು ಕಪನೂರ್, ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೀದರ್ : ಸಚಿವ ಪ್ರಿಯಾಂಕ್ ಖರ್ಗೆ ಹೆಸರು ತಳುಕು ಹಾಕಿಕೊಂಡ ಕಾರಣಕ್ಕೆ ತೀವ್ರ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ಯುವ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣ ಕುರಿತು ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದ ರಾಜು ಕಪನೂರ್, ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಚಿನ್ ಡೆತ್‌ನೋಟ್‌ನಲ್ಲಿದ್ದ 8 ಜನರಿಗೂ ವಿಚಾರಣೆಗೆ ಬರಲು ಜ.6ರಂದು ಸಿಐಡಿ ನೋಟಿಸ್ ನೀಡಿತ್ತು
ರಾಜು ಕಪನೂರ ಹಾಗೂ ನಾಲ್ವರು ತಮ್ಮ ವಕೀಲರೊಂದಿಗೆ ಬೀದರ್‌ನ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸಿಐಡಿ ವಿಚಾರಣೆಗೆ ಶುಕ್ರವಾರ ಬೆಳಗ್ಗೆ ಹಾಜರಾಗಿದ್ದರು. ಕೆಲ ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಐಡಿ ಡಿಎಸ್‌ಪಿ ಸುಲೇಮಾನ್ ತಹಸೀಲ್ದಾರ್ ನೇತೃತ್ವದ ಪೊಲೀಸರ ತಂಡ, ನಂತರ ರಾಜು ಕಪನೂರ್, ನಂದಕುಮಾರ ನಾಗಭುಜಂಗೆ, ಗೋರಖನಾಥ ಸಜ್ಜನ್, ರಾಮನಗೌಡ ಪಾಟೀಲ್ ಹಾಗೂ ಸತೀಶ ದುಬಲಗುಂಡಿ ಅವರನ್ನು ಬಂಧಿಸಿತು. ಐವರನ್ನೂ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಅಲ್ಲಿಂದ ನೇರವಾಗಿ ಜಿಲ್ಲಾ ನ್ಯಾಯಾಧೀಶರ ಬಳಿ ಹಾಜರುಪಡಿಸಲಾಯಿತು. ಕೋರ್ ರಾಜು ಹಾಗೂ ಇತರೆ ನಾಲ್ವರನ್ನು 5 ದಿನ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಘಟನೆಯ ಹಿನ್ನೆಲೆ:
ಬೀದರ್ ಜಿಲ್ಲೆಯ ಕಟ್ಟಿತೂಗಾಂವ್ ಗ್ರಾಮ ಮೂಲದ ಯುವ ಗುತ್ತಿಗೆದಾರ ಸಚಿನ್ ಪಂಚಾಳ ಕಳೆದ ಡಿಸೆಂಬರ್ 26ರಂದು ಬೀದರ್ ನಗರದ ಹೊರವಲಯದಲ್ಲಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಸ್ಥಳದಲ್ಲಿ ಲಭ್ಯವಾದ ಡೆತ್‌ನೋಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ ಸೇರಿದಂತೆ 8 ಜನರ ಕಿರುಕುಳ, ಮೋಸ ಸೇರಿದಂತೆ ಹತ್ಯೆಯ ಬೆದರಿಕೆ ಆತ್ಮಹತ್ಯೆಗೆ ಮೂಲ ಕಾರಣ ಎಂದು ನಮೂದಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಅಲ್ಲದೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಆಂದೋಲ ಸ್ವಾಮೀಜಿ, ಬಿಜೆಪಿ ಮುಖಂಡರಾದ ಮಣಿಕಂಠ ರಾಠೋಡ ಹಾಗೂ ಚಂದು ಪಾಟೀಲ್ ಅವರ ಹತ್ಯೆಗೆ ಮಹಾರಾಷ್ಟ್ರ ದವರಿಗೆ ಸುಪಾರಿ ನೀಡಲಾಗಿದೆ ಎಂದೂ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಇದೆಲ್ಲವೂ ರಾಜ್ಯಾದ್ಯಂತ ಸಂಚಲನ ಮೂಡಿಸಿ ಬಿಜೆಪಿಯು ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಪಟ್ಟು ಹಿಡಿದಿತ್ತು.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಜ.4ರಂದು ಕಲಬುರಗಿಯಲ್ಲಿ ಖರ್ಗೆ ಮನೆ ಮುತ್ತಿಗೆ ಹಾಕಿತ್ತು. ಅಲ್ಲದೆ ಕಾಂಗ್ರೆಸ್ ವಿರುದ್ದ ವಾಕ್ಸಮರವನ್ನೇ ನಡೆಸಿತ್ತು. ಇದಲ್ಲದೆ ಸಚಿನ್ ಕುಟುಂಬಸ್ಥರು ಸರ್ಕಾರ ಹಾಗೂ ಬಿಜೆಪಿ ಧನ ಸಹಾಯ ತಿರಸ್ಕರಿಸಿ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಆದರೆ, ರಾಜ್ಯ ಸರ್ಕಾರ ತನಿಖೆ ಸಿಐಡಿಗೆ ವಹಿಸಿ ಆದೇಶಿಸಿದೆ.