ಯುವಕನೊಬ್ಬನನ್ನು ಮೂವರು ಚಾಕುವಿನಿಂದ ಇರಿದು ಹಾಗೂ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದ ವಿವೇಕಾನಂದನಗರದ ಆರ್.ಎಂ.ಸಿ. ಹಿಂಭಾಗದ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಆಲಗೂಡು ಗ್ರಾಮದ ರಾಚಪ್ಪ ಎಂಬವರ ಪುತ್ರ ಸುಭಾಷ್ ನಾಯಕ (26) ಹತ್ಯೆಗೀಡಾದವರು.
ಕನ್ನಡಪ್ರಭ ವಾರ್ತೆ ಟಿ.ನರಸೀಪುರ
ಯುವಕನೊಬ್ಬನನ್ನು ಮೂವರು ಚಾಕುವಿನಿಂದ ಇರಿದು ಹಾಗೂ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದ ವಿವೇಕಾನಂದನಗರದ ಆರ್.ಎಂ.ಸಿ. ಹಿಂಭಾಗದ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಆಲಗೂಡು ಗ್ರಾಮದ ರಾಚಪ್ಪ ಎಂಬವರ ಪುತ್ರ ಸುಭಾಷ್ ನಾಯಕ (26) ಹತ್ಯೆಗೀಡಾದವರು
ಕೊಲೆಯಾದ ನಂತರ ಮೂವರು ಆರೋಪಿಗಳಾದ ಆಲಗೂಡು ಗ್ರಾಮದ ಕೆಂಚ ಅ. ಮಹದೇವ (44), ಆತನ ಪುತ್ರ ಎಂ. ಮನು (25) ಹಾಗೂ ಶ್ರೀರಾಮಪುರ ಬೀದಿಯ ಸಂಜಯ್ (31) ಎಂಬವರು ಪೊಲೀಸ್ ಠಾಣೆಗೆ ಖುದ್ದಾಗಿ ತೆರಳಿ ಪೊಲೀಸರಿಗೆ ಶರಣಾಗಿದ್ದಾರೆ. ಈ ಮೂವರನ್ನು ಟಿ. ನರಸೀಪುರ ಪೊಲೀಸರು ವಶಕ್ಕೆ ಪಡೆದು ಸಂಜೆ ನ್ಯಾಯಾಧೀಶ ಮುಂದೆ ಹಾಜರು ಪಡಿಸಿದರು.ಶನಿವಾರ ಬೆಳಗ್ಗೆ ಸುಮಾರು 9ರ ವೇಳೆಗೆ ವಿವೇಕಾನಂದನಗರದ ಆರ್ಎಂಸಿ ಹಿಂಭಾಗದಲ್ಲಿರುವ ಮಣಿ ಎಂಬವರ ಮನೆಗೆ ಆರೋಪಿಗಳು ತೆರಳಿ, ಮನೆಯಲ್ಲಿದ್ದ ಸುಭಾಷ್ ನಾಯಕನೊಂದಿಗೆ ಜಗಳ ತೆಗೆದರು. ಬಳಿಕ ಮೂವರು ಸೇರಿ ಚಾಕುವಿನಿಂದ ಸುಭಾಷ್ನ ಹೊಟ್ಟೆ ಹಾಗೂ ಮೈಕೈಗೆ ಇರಿದು, ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾರೆ. ಬಳಿಕ ಮೂವರು ಆರೋಪಿಗಳು ಪೊಲೀಸ್ ಠಾಣೆಗೆ ತೆರಳಿ, ಶರಣಾಗಿ ಈ ವಿಷಯ ತಿಳಿಸಿದ್ದಾರೆ.
ಹಳೆಯ ದ್ವೇಷವೇ ಕಾರಣ?ಸುಭಾಷ್ ನಾಯಕ ಹಾಗೂ ಆರೋಪಿ ಕೆಂಚ ಅ. ಮಹದೇವ ನಡುವೆ ಈ ಹಿಂದೆ ಗಲಾಟೆ ನಡೆದಿತ್ತು ಎನ್ನಲಾಗಿದೆ. 2024ರ ಮಾರ್ಚ್ನಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಭಾಷ್, ತನ್ನ ತಂದೆ ರಾಚಪ್ಪಾಜಿ ಹಾಗೂ ಕೆಂಚನ ನಡುವೆ ಗಲಾಟೆ ನಡೆದಿದ್ದು, ಆ ಸಂದರ್ಭದಲ್ಲಿ ಸುಭಾಷ್ ಇಬ್ಬರಿಗೂ ಚಾಕುವಿನಿಂದ ಇರಿದಿದ್ದ ಪ್ರಕರಣ ದಾಖಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸುಭಾಷ್ನನ್ನು ಮೂವರು ಸೇರಿ ಹತ್ಯೆ ಮಾಡಿದ್ದಾರೆ ಎಂದು ಮೃತನ ಸೋದರಿ ನಂದಿನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಿಪಿಐ ಧನಂಜಯ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.