ಸಾರಾಂಶ
ಹಲಗೂರು : ಮಾರಕಾಸ್ತ್ರಗಳಿಂದ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಗೆ ಓರ್ವ ಸಾವು, ಮತ್ತೊರ್ವ ಯುವಕನಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಸಮೀಪದ ದೇವಿರಹಳ್ಳಿ ಗೇಟ್ ಬಳಿ ಬುಧವಾರ ರಾತ್ರಿ ನಡೆದಿದೆ.
ಸಮೀಪ ದಳವಾಯಿ ಕೋಡಿಹಳ್ಳಿಯ ಕಾಂತರಾಜು (28) ಮೃತ ಯುವಕ.
ದೇವಿರಹಳ್ಳಿ ಗೇಟ್ ಬಳಿ ವಿನೋದ್ ಕುಮಾರ್ ಅಲಿಯಾಸ್ ಕುಮ್ಮಿ ಮತ್ತು ಕಾಂತರಾಜು ಅವರು ಕುಳಿತಿದ್ದ ಸ್ಥಳಕ್ಕೆ ಬಂದ ಮೂವರು ಅಪರಿಚಿತರು ಏಕಾಏಕಿ ದಾಳಿ ಮಾಡಿ ಇಬ್ಬರಿಗೂ ಮಾರಾಕಾಸ್ತ್ರಗಳಿಂದ ಇರಿದು ಪರಾರಿಯಾಗಿದ್ದಾರೆ.
ಕಾಂತರಾಜು ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡ ವಿನೋದ್ ಕುಮಾರ್ ಅಲಿಯಾಸ್ ಕುಮ್ಮಿ ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸಿಪಿಐ ಶ್ರೀಧರ್ ತನಿಖೆ ಕೈಗೊಂಡಿದ್ದಾರೆ.
130 ಕಿ.ಮೀಗಿಂತ ಹೆಚ್ಚಿನ ವೇಗ ಐವರು ಕಾರು ಚಾಲಕ ವಿರುದ್ಧ ಪ್ರಕರಣ ದಾಖಲು
ಮದ್ದೂರು:ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 130 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿದ್ದ ಐವರು ಕಾರು ಚಾಲಕರ ವಿರುದ್ಧ ಗುರುವಾರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಆ.1ರಿಂದ 130 ಕಿ.ಮೀ. ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಆದೇಶ ಹೊರಡಿಸಿದ್ದರು.ಈ ಹಿನ್ನೆಲೆಯಲ್ಲಿ ಗುರುವಾರ ಕಾರ್ಯಾಚರಣೆಗೆ ಇಳಿದ ಮದ್ದೂರು ವೃತ್ತ ನಿರೀಕ್ಷಕ ಶಿವಕುಮಾರ್ ಹಾಗೂ ಸಂಚಾರಿ ಠಾಣೆ ಪಿಎಸ್ಐ ಜೆ.ಇ. ಮಹೇಶ್ ಹಾಗೂ ಸಿಬ್ಬಂದಿ ಠಾಣಾ ವ್ಯಾಪ್ತಿಯ ನಿಡಘಟ್ಟ ದಿಂದ ಗೆಜ್ಜಲಗೆರೆ ಮನ್ಮುಲ್ ನ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 130 ಕಿಲೋಮೀಟರ್ ಗಿಂತ ಮಿತಿಮೀರಿದ ವೇಗದಲ್ಲಿ ಸಂಚಾರ ಮಾಡುತ್ತಿದ್ದ ಬಗ್ಗೆ ಎನ್ ಪಿಆರ್ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿ ಆಧಾರದ ಮೇಲೆ ಐವರು ಕಾರು ಚಾಲಕರ ವಿರುದ್ಧ ಸಂಚಾರಿ ಪೊಲೀಸರು ಬಿಎನ್ ಎಸ್ ಮತ್ತು 184 ಮೋಟಾರ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಎಫ್ ಐಆರ್ ಸಲ್ಲಿಸಿದ್ದಾರೆ.