ಸಾರಾಂಶ
ಬೆಂಗಳೂರು : ಇತ್ತೀಚಿಗೆ ಜಾರಿಗೊಂಡಿರುವ ಹೊಸ ಭಾರತೀಯ ನ್ಯಾಯ ಸಂಹಿತೆ ಅನ್ವಯ ಜೀರೋ ಎಫ್‌ಐಆರ್ ವ್ಯವಸ್ಥೆಯನ್ನು ಬಳಸಿಕೊಂಡು ಹೈದರಾಬಾದ್‌ನಲ್ಲಿ ನಡೆದಿದ್ದ ಕಳ್ಳತನ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಠ್ಠಲ್ ಮಲ್ಯ ರಸ್ತೆಯ ಯುಬಿ ಟವರ್ಸ್‌ನಲ್ಲಿರುವ ಖಾಸಗಿ ಕಂಪನಿ ಉದ್ಯೋಗಿ ಅಪೂರ್ವ ಪ್ರಕಾಶ್ ದೂರು ನೀಡಿದ್ದು, ಇತ್ತೀಚಿಗೆ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಕಂಪನಿ ಪರವಾಗಿ ತೆರಳಿದ್ದಾಗ ಅವರ ಲ್ಯಾಪ್ ಟಾಪ್ ಕಳ್ಳತನವಾಗಿತ್ತು. ಈ ಬಗ್ಗೆ ಜೀರೋ ಎಫ್‌ಐಆರ್ ವ್ಯವಸ್ಥೆ ಮೂಲಕ ಕಬ್ಬನ್ ಪಾರ್ಕ್ ಠಾಣೆಗೆ ಅಪೂರ್ವ ದೂರು ನೀಡಿದ್ದರು. ಅಂತೆಯೇ ಎಫ್‌ಐಆರ್ ದಾಖಲಿಸಿದ ಸ್ಥಳೀಯ ಪೊಲೀಸರು, ನಂತರ ಮುಂದಿನ ತನಿಖೆಗೆ ಕೃತ್ಯ ನಡೆದಿದ್ದ ಹೈದರಾಬಾದ್ ನಗರದ ಸಂಬಂಧಪಟ್ಟ ಠಾಣೆಗೆ ಎಫ್‌ಐಆರ್ ವರ್ಗಾಯಿಸಿದ್ದಾರೆ.
ಜು.9 ರಂದು ಹೈದರಾಬಾದ್ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಆಯೋಜಿಸಿದ್ದ ಸಮ್ಮೇಳನಕ್ಕೆ ಕಂಪನಿ ಪರವಾಗಿ ಅಪೂರ್ವ ಭಾಗವಹಿಸಿದ್ದರು. ಆ ವೇಳೆ ಅವರ ಲ್ಯಾಪ್‌ಟಾಪ್ ಕಳ್ಳತನವಾಗಿತ್ತು. ಆದರೆ ಅದೇ ದಿನ ಅವರಿಗೆ ಬೆಂಗಳೂರಿಗೆ ಮರಳಲು ವಿಮಾನ ಟಿಕೆಟ್ ಕಾಯ್ದಿರಿಸಲಾಗಿತ್ತು. ಹೀಗಾಗಿ ಈ ಬಗ್ಗೆ ದೂರು ಕೊಡಲು ಸಮಯಾವಕಾಶ ಇಲ್ಲದ ಕಾರಣ ಅಪೂರ್ವ ಮರಳಿದರು. ಆನಂತರ ಕಬ್ಬನ್ ಪಾರ್ಕ್ ಠಾಣೆಗೆ ಲ್ಯಾಪ್‌ಟಾಪ್ ಕಳ್ಳತನ ಬಗ್ಗೆ ಅವರು ದೂರು ಸಲ್ಲಿಸಿದ್ದರು.
ಏನಿದು ಜೀರೋ ಎಫ್‌ಐಆರ್?
ಜೀರೋ ಎಫ್‌ಐಆರ್ ವ್ಯವಸ್ಥೆ ಅನ್ವಯ ಕೃತ್ಯ ನಡೆದ ವ್ಯಾಪ್ತಿಯ ಠಾಣೆ ಹೊರತಾಗಿಯೂ ಯಾವುದೇ ಠಾಣೆಯಲ್ಲಿ ದೂರು ದಾಖಲಿಸಬಹುದು. ದೂರು ದಾಖಲಿಸಲು ಸಂತ್ರಸ್ತರಿಗೆ ಠಾಣಾ ವ್ಯಾಪ್ತಿ ಗಡಿಯಿಲ್ಲ.