ಸಾರಾಂಶ
ಈ ವರ್ಷ ಐದು ತಿಂಗಳು ಮುಗಿಯಲು ಇನ್ನೂ ಮೂರು ವಾರ ಬಾಕಿ ಇದೆ. ಆದರೆ, ಇಲ್ಲಿಯವರೆಗೂ ತೆರೆಕಂಡ ಸಿನಿಮಾಗಳ ಸಂಖ್ಯೆ ಮಾತ್ರ 110. ಮೇ 10ಕ್ಕೆ 19 ವಾರಗಳನ್ನು ನೋಡಿರುವ ಚಿತ್ರರಂಗ 133 ದಿನಗಳಲ್ಲಿ ಪ್ರೇಕ್ಷಕರ ಮುಂದೆ ಸುರಿದ ಈ 110 ಚಿತ್ರಗಳ ಪೈಕಿ ಗೆದ್ದಿದ್ದೆಷ್ಟು, ಹಾಕಿದ ಹಣವನ್ನು ವಾಪಸ್ಸು ತಂದುಕೊಟ್ಟ ಸಿನಿಮಾಗಳನ್ನು ಹುಡುಕುತ್ತಾ ಹೋದರೆ ಮರುಭೂಮಿಯಲ್ಲಿ ಕುಡಿಯುವ ನೀರಿಗಾಗಿ ಅಲೆದಾಡಿದಂತೆ!
ಜನವರಿ ತಿಂಗಳ ಮೊದಲ ವಾರದಲ್ಲಿ ಬಂದ ‘ಆನ್‌ಲೈನ್ ಮದುವೆ ಆಫ್‌ಲೈನ್ ಶೋಭನ’ ಚಿತ್ರದಿಂದ ಶುರುವಾಗಿ ಮೇ 10ಕ್ಕೆ ತೆರೆಗೆ ಬಂದ ‘ರಾಮನ ಅವತಾರ’, ‘ಗ್ರೇ ಗೇಮ್ಸ್’ ಹಾಗೂ ‘4ಎನ್6’ ವರೆಗೂ 110 ಚಿತ್ರಗಳು ಬಿಡುಗಡೆಗೊಂಡಿರುವ ಲೆಕ್ಕ ಸಿಗುತ್ತದೆ. ಪ್ರತಿ ವಾರ 2 ರಿಂದ 6 ಸಿನಿಮಾಗಳು ತೆರೆಗೆ ಬಂದಿವೆ. ಏಳನೇ ವಾರದಲ್ಲಿ 12 ಸಿನಿಮಾಗಳು ತೆರೆಗೆ ಬರುವ ದಾಖಲೆ ಬರೆಯಲಾಗಿದೆ.
110 ಮೇಲೆ ಹೂಡಿದ್ದೆಷ್ಟು?
ಬಿಡುಗಡೆ ಆದ ಇಷ್ಟೂ ಚಿತ್ರಗಳಲ್ಲಿ ನಿರ್ಮಾಪಕರು ಹೂಡಿದ ಹಣ ಎಷ್ಟು? ಒಂದು ಚಿತ್ರಕ್ಕೆ ಸರಾಸರಿ 2.5 ಕೋಟಿಯಿಂದ ಶುರುವಾಗಿ 3 ಕೋಟಿವರೆಗೂ ಹೂಡಿಕೆ ಮಾಡಲಾಗಿದೆ. ಕೆಲವು ಚಿತ್ರಗಳು ಮಾತ್ರ 5 ಕೋಟಿ ವೆಚ್ಚ ದಾಟಿವೆ. ಈ ಲೆಕ್ಕದಲ್ಲಿ 110 ಚಿತ್ರಗಳ ನಿರ್ಮಾಣದ ಒಟ್ಟು ಬಜೆಟ್ 220 ರಿಂದ 250 ಕೋಟಿ ಎನ್ನುತ್ತದೆ ಚಿತ್ರರಂಗ.
ಮರಳಿ ಬಂದಿದ್ದು ಎಷ್ಟು?
ಚಿತ್ರಮಂದಿರಗಳಿಂದಲೇ ನಿರ್ಮಾಪಕ ಒಂದೆರಡು ಕಾಸು ನೋಡುವಂತೆ ಮಾಡಿರುವುದು ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಹಾಗೂ ದೀಕ್ಷಿತ್ ಶೆಟ್ಟಿ ನಟನೆಯ ‘ಬ್ಲಿಂಕ್’ ಚಿತ್ರಗಳು ಮಾತ್ರ. ಅಲ್ಲದೆ ಟೀವಿ ರೈಟ್ಸ್ ಹಾಗೂ ಓಟಿಟಿ ಹಕ್ಕುಗಳು ಮಾರಾಟ ಆಗಿರುವುದು ‘ಯುವ’, ‘ಅವತಾರ ಪುರುಷ 2’, ‘ಕೆಟಿಎಂ’ ಹಾಗೂ ‘ಒಂದು ಸರಳ ಪ್ರೇಮ ಕತೆ’ ಚಿತ್ರಗಳು ಮಾತ್ರ. ಉಳಿದಂತೆ ಹಲವು ಸಿನಿಮಾಗಳನ್ನು ಓಟಿಟಿಗಳು ಪೇಪರ್ ವ್ಯೂ ಆಧಾರದ ಮೇಲೆ ತೆಗೆದುಕೊಂಡಿವೆ. ಹೀಗೆ ಏನೇ ಲೆಕ್ಕ ಹಾಕಿದರೂ 250 ಕೋಟಿ ಹೂಡಿಕೆಯಲ್ಲಿ ಕನ್ನಡ ಚಿತ್ರರಂಗದ ಗಳಿಕೆ100 ಕೋಟಿಯನ್ನೂ ಮುಟ್ಟಿಲ್ಲ. ಹೀಗಾಗಿ 19 ವಾರಗಳಲ್ಲಿ 110 ಸಿನಿಮಾಗಳಿಂದ ಕನ್ನಡ ಚಿತ್ರೋದ್ಯಮ ಕಳೆದುಕೊಂಡಿದ್ದ ಸುಮಾರು 180 ಕೋಟಿ.
ಪ್ರೇಕ್ಷಕರು ಮೆಚ್ಚಿದರು
ಲಾಭ- ನಷ್ಟದ ವಹಿವಾಟಿನ ಹೊರತಾಗಿ ಬಹಳಷ್ಟು ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಕೋಳಿ ಎಸ್ರು, ಹದಿನೇಳೆಂಟು, ಕೇಸ್ ಆಫ್ ಕೊಂಡಾಣ, ರವಿಕೆ ಪ್ರಸಂಗ, ಧೈರ್ಯಂ ಸಾರ್ವತ್ರ ಸಾಧನಂ, ಜುಗಲ್‌ಬಂಧಿ, ಶಾಖಾಹಾರಿ, ಕೆರೆಬೇಟೆ, ಫೋಟೋ, ಸೋಮು ಸೌಂಡ್ ಇಂಜಿನಿಯರ್, ಒಂದು ಸರಳ ಪ್ರೇಮ ಕತೆ... ಹೀಗೆ ಒಂದಿಷ್ಟು ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸುವ ಮೂಲಕ ಮುಂದೆ ಬರಲಿರುವ ಚಿತ್ರಗಳ ಮೇಲಿನ ಭರವಸೆ ಇಟ್ಟುಕೊಳ್ಳುವುದಕ್ಕೆ ಕಾರಣ ಆಗಿವೆ.
ನಿರ್ಮಾಣ ತಿಳುವಳಿಕೆ ಇಲ್ಲದ ನಿರ್ಮಾಪಕರೇ ಜಾಸ್ತಿ
ಸಿನಿಮಾ ಬಗ್ಗೆ ತಿಳುವಳಿಕೆ ಇಲ್ಲದ ನಿರ್ಮಾಪಕರೇ ಹೆಚ್ಚಿದ್ದಾರೆ. ಯಾರೂ ಕೂಡ ಸಿನಿಮಾ ನಿರ್ಮಾಣ, ಮಾರುಕಟ್ಟೆ, ಬಿಸಿನೆಸ್ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡುತ್ತಿಲ್ಲ. ನಿರ್ದೇಶಕರು ನಿರ್ಮಾಪಕರನ್ನು ಹುಡುಕುವ ಬದಲು ನಿರ್ಮಾಪಕ ನಿರ್ದೇಶಕನನ್ನು ಹುಡುಕಿಕೊಂಡು ಹೋಗಬೇಕು, ನಿರ್ದೇಶಕ ಕಲಾವಿದರನ್ನು ಹುಡುಕಬೇಕು. ಆದರೆ, ನಮ್ಮ ಚಿತ್ರರಂಗದಲ್ಲಿ ಇದು ಉಲ್ಟಾ ಆಗುತ್ತಿದೆ. ಸೋಲಿಗೆ ಇದು ಬಹುಮುಖ್ಯ ಕಾರಣ.
- ರವೀಂದ್ರ, ಬ್ಲಿಂಕ್ ಸಿನಿಮಾ ನಿರ್ಮಾಪಕ