ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 1290 ವೈದ್ಯರ ಕೊರತೆ ನೀಗಿಸಲು ಶೀಘ್ರ ಕೈಗೊಳ್ಳಲಿದ್ದೇವೆ. ತಕ್ಷಣವೇ 200 ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 1290 ವೈದ್ಯರ ಕೊರತೆ ನೀಗಿಸಲು ಶೀಘ್ರ ಕೈಗೊಳ್ಳಲಿದ್ದೇವೆ. ತಕ್ಷಣವೇ 200 ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.ನೂತನವಾಗಿ ಆರೋಗ್ಯ ಇಲಾಖೆ ಜವಾಬ್ದಾರಿ ವಹಿಸಿಕೊಂಡಿರುವ ಅವರು ಬುಧವಾರ ಆರೋಗ್ಯ ಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 1290 ವೈದ್ಯರ ಹುದ್ದೆ ನೇಮಕಕ್ಕೆ ನಿರ್ಧರಿಸಿದ್ದೇವೆ. 200 ಹುದ್ದೆ ತ್ವರಿತ ನೇಮಕ ಮಾಡಿ ಉಳಿದ 1,090 ವೈದ್ಯರನ್ನು ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ ಮೂಲಕ ಅರ್ಜಿ ಆಹ್ವಾನಿಸಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.ಪ್ರಗತಿ ಪರಿಶೀಲನಾ ಸಭೆಯಲ್ಲಿ ವೈದ್ಯರ ಕೊರತೆ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ರಾಜ್ಯದಲ್ಲಿ 1290 ಎಂಬಿಬಿಎಸ್ ವೈದ್ಯರು, 924 ತಜ್ಞ ವೈದ್ಯರು, 892 ಶುಶ್ರೂಷಕರ ಕೊರತೆಯಿದೆ. ಮೊದಲ ಹಂತದಲ್ಲಿ 1290 ವೈದ್ಯರ ನೇಮಕಾತಿಗೆ ನಿರ್ಧರಿಸಿದ್ದೇವೆ. ಜತೆಗೆ ತಲಾ 400 ಫಾರ್ಮಸಿಸ್ಟ್, ಶುಶ್ರೂಷಕರು, ಲ್ಯಾಬ್ ಟೆಕ್ನಿಶಿಯನ್ಸ್ ನೇಮಕಾತಿಗೆ ಕ್ರಮ ವಹಿಸಲಿದ್ದೇವೆ ಎಂದು ಖಾದರ್ ಭರವಸೆ ನೀಡಿದರು.
5 ವರ್ಷ ಕಾರ್ಯಕ್ಷಮತೆ ಗಮನಿಸಿ ಕಾಯಂ:ಗುತ್ತಿಗೆ ಆಧಾರದಲ್ಲಿ ಸೇವೆಗಾಗಿ ಎಂಬಿಬಿಎಸ್ ಅಥವಾ ಸ್ನಾತಕೋತ್ತರ ವೈದ್ಯಕೀಯ (ಪಿಜಿ) ವ್ಯಾಸಂಗ ಮಾಡಿದ ವೈದ್ಯರು ಡಿಎಚ್‌ಒಗೆ ಅರ್ಜಿ ಸಲ್ಲಿಸಬಹುದು. ಹೀಗೆ ನೇಮಕವಾದವರು 5 ವರ್ಷ ಉತ್ತಮವಾಗಿ ಕಾರ್ಯ ನಿರ್ವಹಿಸಿದಲ್ಲಿ ಅವರ ಕಾರ್ಯಕ್ಷಮತೆ ಆಧರಿಸಿ ಕಾಯಂ ಸರ್ಕಾರಿ ವೈದ್ಯರನ್ನಾಗಿ ನೇಮಿಸಿಕೊಳ್ಳುತ್ತೇವೆ. ಇವರು ಪುನಃ ಪರೀಕ್ಷೆ ಬರೆಯುವ ಅಗತ್ಯವೂ ಇರುವುದಿಲ್ಲ ಎಂದು ಯು.ಟಿ.ಖಾದರ್ ಸ್ಪಷ್ಟಪಡಿಸಿದರು.
ಪಿಜಿ ವ್ಯಾಸಂಗಕ್ಕೆ ಅವಕಾಶ:ಎಂಬಿಬಿಎಸ್ ವೈದ್ಯರು 5 ವರ್ಷ ಸೇವೆ ಸಲ್ಲಿಸಿದ ಬಳಿಕ ಪಿಜಿ ಮಾಡಲು ಇಚ್ಛಿಸಿದಲ್ಲಿ ಅದಕ್ಕೂ ಅವಕಾಶ ಕಲ್ಪಿಸುತ್ತೇವೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಯೋಜಿಸಿದ್ದೇವೆ. ಈವರೆಗೆ ಪಿಜಿ ಮಾಡಲು ಅವಕಾಶವಿಲ್ಲ ಎಂಬ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಎಂಬಿಬಿಎಸ್ ವೈದ್ಯರಿಗೆ ₹60 ಸಾವಿರ ಹಾಗೂ ಪಿಜಿ ಕಲಿತವರಿಗೆ ₹1.10 ಲಕ್ಷ ವೇತನ ನೀಡಲಾಗುವುದು. ಕುಗ್ರಾಮ, ಗಡಿಭಾಗದಲ್ಲಿ ಸೇವೆ ಸಲ್ಲಿಸಲು ಮುಂದೆ ಬಂದಲ್ಲಿ ₹15 ಸಾವಿರ ಹೆಚ್ಚುವರಿ ಸಂಬಳ ಪಡೆಯಲಿದ್ದಾರೆ. ನಿವೃತ್ತರಾದ ವೈದ್ಯರು ಮಾನಸಿಕ ಹಾಗೂ ದೈಹಿಕವಾಗಿ ಸದೃಡರಾಗಿದ್ದರೆ, ಗುತ್ತಿಗೆ ಆಧಾರದಲ್ಲಿ 70 ವರ್ಷದವರೆಗೆ ಅವರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.3 ತಿಂಗಳಲ್ಲಿ ಔಷಧ ಕೊರತೆಗೆ ಪರಿಹಾರ:
ಪ್ರಸ್ತುತ 200ಕ್ಕೂ ರೀತಿಯ ಔಷಧ ಖರೀದಿಗೆ ಟೆಂಡರ್ ಆಗಿದ್ದು, ಮುಂದಿನ 3 ತಿಂಗಳಲ್ಲಿ ಔಷಧ ಕೊರತೆ ನೀಗಿಸುತ್ತೇವೆ. ಮುಂದಿನ ವರ್ಷಕ್ಕೆ ಅಗತ್ಯವಿರುವ ಔಷಧ ಖರೀದಿಗೂ ಕ್ರಮ ಕೈಗೊಳ್ಳುತ್ತೇವೆ. ಶಿವಮೊಗ್ಗ, ಶಿರಸಿ, ಸಾಗರ ಸೇರಿ ಇನ್ನಿತರ ಕಡೆ ಕಂಡುಬರುವ ಮಂಗನ ಕಾಯಿಲೆ ಚಿಕಿತ್ಸೆಗೆ ಚುಚ್ಚು ಮದ್ದು ಲಭ್ಯತೆ, ಹಾವು ಕಡಿತ ಚಿಕಿತ್ಸೆಗೆ ಅಗತ್ಯ ಔಷಧ ಒದಗಿಸಲು ಸೂಚಿಸಿದ್ದೇನೆ ಎಂದು ಖಾದರ್ ತಿಳಿಸಿದರು.ಜತೆಗೆ ಮಾನಸಿಕ ಸಮಸ್ಯೆ, ಕಣ್ಣಿನ ಸಮಸ್ಯೆಗೆ ಪರಿಹಾರ, ಚಿಕಿತ್ಸೆಗೆ ಇರುವ ಯೋಜನೆಗಳ ಬಗ್ಗೆ ಅಗತ್ಯ ಕ್ರಮಕ್ಕೆ ತಜ್ಞ ವೈದ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದರು.