ಕನ್ನಡಪ್ರಭ ವಾರ್ತೆ ಬೆಂಗಳೂರು
ವನ್ಯಜೀವಿ ಹಾಗೂ ಸಸ್ತನಿಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು, ಖಾಸಗಿ ಆಸ್ಪತ್ರೆ ವೈದ್ಯನನ್ನು ಬಂಧಿಸಿದ್ದಾರೆ.ಕುಮಾರಸ್ವಾಮಿ ಲೇಔಟ್‌ನ ಆದರ್ಶ ಅಪಾರ್ಟ್‌ಮೆಂಟ್ ನಿವಾಸಿ ಡಾ.ರಾಜ್ ಕಮಲ್ ಬಂಧಿತನಾಗಿದ್ದು, ಆರೋಪಿಯಿಂದ 1 ನಕ್ಷತ್ರ ಆಮೆ ಸೇರಿದಂತೆ 14 ಆಮೆಗಳು, 4 ಬಿಳಿ ಬಣ್ಣದ ಹಾವುಗಳು ಹಾಗೂ ಊಸರವಳ್ಳಿ ಜಪ್ತಿ ಮಾಡಲಾಗಿದೆ. ದಾಳಿ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಫಾರೂಕ್ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನಗರದಲ್ಲಿ ವನ್ಯ ಜೀವಿಗಳ ಮಾರಾಟದ ಬಗ್ಗೆ ಮಾಹಿತಿ ಪಡೆದು ಕುಮಾರಸ್ವಾಮಿ ಲೇಔಟ್‌ನಲ್ಲಿದ್ದ ವೈದ್ಯನ ಮನೆ ಮೇಲೆ ಡಿಐಜಿ ಜಿ.ಸಂಗೀತಾ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪಿ.ಎಸ್.ಸುದರ್ಶನ್ ಸಾರಥ್ಯದಲ್ಲಿ ಪಿಎಸ್‌ಗಳಾದ ಶರಣ ಬಸವರಾಜ ಬಿರಾದಾರ ಹಾಗೂ ಬಿ.ಟಿ.ಸರಸ್ವತಿ ತಂಡ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫಾರೂಕ್ ಮಾಸ್ಟರ್ ಮೈಂಡ್:ಆರೋಪಿ ವೈದ್ಯ ರಾಜ್‌ಕಮಲ್ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಈತನಿಗೆ ಸ್ಮಗ್ಲರ್ ಫಾರೂಕ್ ಪರಿಚಯವಾಗಿದೆ. ಕಾಡು ಪ್ರಾಣಿಗಳ ಮಾರಾಟ ದಂಧೆಯಲ್ಲಿ ಫಾರೂಕ್ ನಿರತನಾಗಿದ್ದು, ಈತನ ವಿರುದ್ಧ ಹಲವು ಪ್ರಕರಣಗಳಿವೆ. ಹಣದಾಸೆಗೆ ವನ್ಯಜೀವಿಗಳ ಸಾಗಾಣಿಕೆ ಜಾಲದಲ್ಲಿ ಫಾರೂಕ್ ಜತೆ ರಾಜ್ ಕಮಲ್ ಶಾಮೀಲಾಗಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ.
ವಿಚಾರಣೆ ವೇಳೆ ತಾನು ಹವ್ಯಾಸಕ್ಕಾಗಿ ಆಮೆ, ಹಾವು ಹಾಗೂ ಊಸರವಳ್ಳಿ ಸಾಕುತ್ತಿದ್ದಾಗಿ ವೈದ್ಯ ಹೇಳಿಕೆ ನೀಡಿದ್ದಾನೆ. ತಪ್ಪಿಸಿಕೊಂಡಿರುವ ಫಾರೂಕ್ ಪತ್ತೆಯಾದ ಬಳಿಕ ಎಲ್ಲಿಂದ ಆಮೆ ಹಾಗೂ ಹಾವುಗಳನ್ನು ಹಿಡಿದು ತಂದಿದ್ದ ಎಂಬುದು ಗೊತ್ತಾಗಲಿದೆ ಎಂದು ಅಧಿಕಾರಗಳು ತಿಳಿಸಿದ್ದಾರೆ.
ಅದೃಷ್ಟದ ನೆಪದಲ್ಲಿ ₹20 ಸಾವಿರಕ್ಕೆ ಮಾರಾಟ
ಮನೆಯಲ್ಲಿ ಸಾಕಿದರೆ ಅದೃಷ್ಟ ಬರುತ್ತದೆ ಎಂದು ಹೇಳಿ ಆಮೆ ಹಾಗೂ ಹಾವುಗಳನ್ನು ಆರೋಪಿಗಳು ಮಾರುತ್ತಿದ್ದರು. ತಲಾ ಒಂದಕ್ಕೆ ₹20 ರಿಂದ 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇತ್ತೀಚಿಗೆ ಈ ದಂಧೆಯಲ್ಲಿ ವೈದ್ಯ ರಾಜ್‌ಕಮಲ್ ಸಕ್ರಿಯವಾಗಿದ್ದ ಬಗ್ಗೆ ಬಾತ್ಮೀದಾರರ ಮೂಲಕ ಸುಳಿವು ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.