ಬಿಜೆಪಿ ಅಧಿಕಾರದಲ್ಲಿದ್ದಾಗ ಮತ್ತು ಭಟ್ಕಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು, ಈಗಿನ ಸಂಸದರೇ ಸ್ಪೀಕರ್ ಇದ್ದಾಗ ಮುರಿನಕಟ್ಟೆ ಪ್ರಕರಣವನ್ನು ಯಾಕೆ ಇತ್ಯರ್ಥಗೊಳಿಸಲು ಸಾಧ್ಯವಾಗಿಲ್ಲ.
ಬಿಜೆಪಿ ಅಧಿಕಾರದಲ್ಲಿದ್ದಾಗ ಮುರಿನಕಟ್ಟೆ ಸಮಸ್ಯೆ ಯಾಕೆ ಇತ್ಯರ್ಥ ಪಡಿಸಲಿಲ್ಲ?
ಕನ್ನಡಪ್ರಭ ವಾರ್ತೆ ಭಟ್ಕಳಬಿಜೆಪಿ ಅಧಿಕಾರದಲ್ಲಿದ್ದಾಗ ಮತ್ತು ಭಟ್ಕಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು, ಈಗಿನ ಸಂಸದರೇ ಸ್ಪೀಕರ್ ಇದ್ದಾಗ ಮುರಿನಕಟ್ಟೆ ಪ್ರಕರಣವನ್ನು ಯಾಕೆ ಇತ್ಯರ್ಥಗೊಳಿಸಲು ಸಾಧ್ಯವಾಗಿಲ್ಲ ಎಂದು ಮಾಜಿ ಸಚಿವ ಮಂಕಾಳ ಎಸ್. ವೈದ್ಯ ಪ್ರಶ್ನಿಸಿದ್ದಾರೆ.
ದೇವಸ್ಥಾನ, ನಂಬಿಕೆ ಸ್ಥಾನಗಳ ಕುರಿತು ತೊಂದರೆಯಾದಾಗ ಪಕ್ಷದ ವತಿಯಿಂದ ಪ್ರತಿಭಟನೆ ಮಾಡುವುದರ ಬದಲು ಬಿಜೆಪಿ ಪಕ್ಷಾತೀತವಾಗಿ ಪ್ರತಿಭಟನೆ ಮಾಡಬೇಕಾಗಿತ್ತು. ಇದು ರಾಜಕಾರಣ ಮಾಡುವ ವಿಷಯವಲ್ಲ ಎಂದ ಮಂಕಾಳ ವೈದ್ಯ, ಪ್ರತಿಭಟನೆಯಲ್ಲಿ ತನ್ನ ವಿರುದ್ದ ಧಿಕ್ಕಾರ ಕೂಗಿದ್ದಕ್ಕೆ ಕೆಂಡಾಮಮಡಲವಾದ ಮಂಕಾಳ ವೈದ್ಯ ಅವರು, ಇದು ಪರಶುರಾಮನ ಸೃಷ್ಟಿ, ಇಲ್ಲಿ ದೇವಸ್ಥಾನದ ಕುರಿತು ರಾಜಕೀಯ ಮಾಡಿದವರು ಸರ್ವನಾಶವಾಗಿ ಹೋಗುತ್ತಾರೆ.ನಾನು ದೇವಸ್ಥಾನವನ್ನು ಕಟ್ಟುವವನು, ಮುರಿನಕಟ್ಟೆಯನ್ನು ಹೇಗೆ ಮಾಡಬೇಕು, ಎಲ್ಲಿ ಮಾಡಬೇಕು, ಅದರ ಮೂಲ ಎಲ್ಲಿದೆ ಎನ್ನುವುದನ್ನು ತಿಳಿದುಕೊಂಡು ಹೇಗಾಗಬೇಕು ಅದೇ ರೀತಿಯಲ್ಲಿ ಮಾಡುತ್ತೇನೆ. ಬಿಜೆಪಿಯವರು ಎಂದೂ ದೇವಸ್ಥಾನ ಕಟ್ಟುವವರಲ್ಲ, ಅವರು ಕಟ್ಟುವವರಿಗೆ ತೊಂದರೆ ಕೊಡುವುದನ್ನೇ ರೂಢಿಸಿಕೊಂಡಿದ್ದಾರೆ. ನಾನು ಕಟ್ಟುತ್ತೇನೆ ಎಂದರೆ ಇವರು ಹೋಗ್ರೋ ಬೈಯ್ರೋ ಎನ್ನುವ ಮನಸ್ಥಿತಿಯವರು ಎಂದು ಖಾರವಾಗಿ ಹೇಳಿದರು.
ದೇವಸ್ಥಾನವನ್ನು ಕಟ್ಟುವವ ನಾನು, ಕೆಡವುವವನಲ್ಲ ಎಂದು ಈ ಹಿಂದೆಯೇ ನಾನು ಸ್ಪಷ್ಟಪಡಿಸಿದ್ದು ಅದಕ್ಕೆ ಬದ್ಧನಾಗಿದ್ದೇನೆ ಎಂದರು. ಪಕ್ಷಾತೀತರಾಗಿ ಹೋರಾಟ ಮಾಡುವುದನ್ನು ಬಿಟ್ಟು ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಂಡಿರುವುದು ತಪ್ಪು. ವಿಜಯೇಂದ್ರ ಅವರೇ, ಆರ್. ಅಶೋಕ ಅವರೇ ಇಲ್ಲಿ ದೇವಸ್ಥಾನದ ಕುರಿತು ರಾಜಕಾರಣ ಮಾಡಲು ಬರುವುದು ಸರಿಯಲ್ಲ. ಕಳೆದ ಐದು ವರ್ಷ ಇಲ್ಲಿ ಏನೂ ಮಾಡದೇ ಈಗ ಮಾಡಲು ಬಂದಿರುವುದನ್ನು ಖಂಡಿಸಿದ ಅವರು, ಈಗ ಬಂದಿರುವುದು ತೊಂದರೆ ಕೊಡಲಿಕ್ಕೆ ಮಾತ್ರ ಎಂದೂ ಹೇಳಿದರು. ನಾನು ಸಾಮಾನ್ಯ ಜನರೊಂದಿಗೆ, ಬಡವರೊಂದಿಗೆ ಇರುವವನು. ನನಗೆ ಬಡವರ, ಸಾಮಾನ್ಯ ಜನರ ಆಶೀರ್ವಾದ ಇದೆ. ಇಲ್ಲಿ ಅನ್ಯಾಯ ಮಾಡಿದವರು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.