ಸಾರಾಂಶ
ಆರ್. ಕೇಶವಮೂರ್ತಿ
ಯಾಕೆ ಚಿತ್ರರಂಗದಿಂದ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದು?
ಅಪ್ಪ ಹೋದ ಮೇಲೆ ಏನೂ ಮಾಡಬೇಕು ಅಂತಲೂ ಗೊಂದಲದಲ್ಲಿದ್ದೆ. ಎರಡು ವರ್ಷ ಚಿತ್ರರಂಗದಿಂದ ದೂರವಾದೆ. ಅದಕ್ಕೂ ಮೊದಲು ಯಾವ ರೀತಿಯ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೆ, ಚಿತ್ರರಂಗದಲ್ಲಿ ನಾನು ಇದ್ದು ಇಲ್ಲದಂತೆ ಅನಿಸುತ್ತಿತ್ತು. ಆದರೆ, ಕಿರಣ್ ಎಸ್ ಸೂರ್ಯ ನಿರ್ದೇಶನದ ‘ಎಲ್ಲಿಗೆ ಪಯಣ, ಯಾವುದೋ ದಾರಿ’ ಚಿತ್ರದಲ್ಲಿ ನಟಿಸಿದ ಮೇಲೆ ನನ್ನ ಆಯ್ಕೆಗಳಿಗೆ ಒಂದು ಸ್ಪಷ್ಟತೆ ಸಿಕ್ಕಿತು.
ಅದು ಯಾವ ರೀತಿಯ ಸಿನಿಮಾ?
ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ನಮ್ಮ ತಂದೆಯವರ ಸಿನಿಮಾಗಳನ್ನು ನೋಡಿದಂತೆ ಇರುತ್ತದೆ. ಅಂದರೆ ಅವರು ಒಂದು ವಿಷಯವನ್ನು ಇಟ್ಟು, ಅದರಿಂದ ಏನೆಲ್ಲಾ ಕ್ರಿಯೇಟ್ ಆಗುತ್ತದೆ ಎಂಬುದನ್ನು ಕುತೂಹಲಭರಿತವಾಗಿ ಹೇಳುತ್ತಾ ಹೋಗುತ್ತಾರಲ್ಲ, ಆ ರೀತಿಯ ಸಿನಿಮಾ ಇದು. ಜನರಿಗೆ ಕನೆಕ್ಟ್ ಆಗುವ ಕತೆ. ನನಗೆ ತುಂಬಾ ಮಹತ್ವದ ಚಿತ್ರವಿದು.
ನಿಮ್ಮ ಮುಂದೆ ಈಗ ಯಾವೆಲ್ಲ ಚಿತ್ರಗಳಿವೆ?
ಚಿತ್ರೀಕಣ ಮುಗಿಸಿ, ಸೆನ್ಸಾರ್‌ಗೆ ಹೋಗಲು ರೆಡಿ ಇರುವ ‘ಸೂರಿ ಲವ್ಸ್ ಸಂಧ್ಯಾ’ ಇದೆ. ‘ಅಭಿಮನ್ಯು s/o ಕಾಶಿನಾಥ್’ ಚಿತ್ರಕ್ಕೆ ಮುಹೂರ್ತ ಆಗಿದೆ. ಈ ಪೈಕಿ ‘ಸೂರಿ ಲವ್ಸ್ ಸಂಧ್ಯಾ’ ತುಂಬಾ ನ್ಯಾಚರುಲ್ಲಾಗಿ ಮೂಡಿ ಬಂದಿರುವ ಕಮರ್ಷಿಯಲ್ ಸಿನಿಮಾ. ‘ಅಭಿಮನ್ಯು s/o ಕಾಶಿನಾಥ್’ ಅಪ್ಪನ ಜಾನರ್ ಸಿನಿಮಾ. ಅಂದರೆ ಕಾಶಿನಾಥ್ ಅವರ ಕತೆಗಳು ಈಗಿನ ಹೀರೋ ಮಾಡಿದರೆ ಹೇಗಿರುತ್ತದೆ ಎಂಬುದನ್ನು ಹೇಳುವ ಸಿನಿಮಾ ಇದು. ನಾನು ಈ ಚಿತ್ರದಲ್ಲಿ ಕಾಶಿನಾಥ್ ಅವರ ಅಭಿಮಾನಿ ಆಗಿರುತ್ತೇನೆ. ‘ಒಂದು ಮೊಟ್ಟೆಯ ಕತೆ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ರಾಜ್‌ಕುಮಾರ್, ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ಚಿತ್ರದಲ್ಲಿ ಯಶ್ ಅವರು ಡಾ ವಿಷ್ಣುವರ್ಧನ್ ಅಭಿಮಾನಿ ಆಗಿರುತ್ತಾರಲ್ಲ, ಆ ರೀತಿಯ ಪ್ಲೇವರ್ ಇರುವ ಸಿನಿಮಾ ‘ಅಭಿಮನ್ಯು s/o ಕಾಶಿನಾಥ್’.
ನಿಮ್ಮ ತಂದೆಯವರು ಇದ್ದಿದ್ದರೆ ನಿಮಗೆ ಯಾವ ರೀತಿ ಸಿನಿಮಾ ಮಾಡುತ್ತಿದ್ದರು?
ಗೊತ್ತಿಲ್ಲ. ಆದರೆ, ಅವರು ಇದ್ದಾಗ ನನಗೆ ಸಿನಿಮಾ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಯಾವತ್ತೂ ನಾನು ನಟ ಆಗಬೇಕು ಅಂತ ಅಪ್ಪನ ಬಳಿ ಹೇಳಿಕೊಂಡಿಲ್ಲ.
ಕಾಶಿನಾಥ್ ಅಗಲಿಕೆ ನಂತರ ನಿಮಗೆ ಜೀವನ ಕಷ್ಟ ಆಗಿದಿಯಾ?
ಅಪ್ಪ ಇಲ್ಲ ಅನ್ನೋ ನೋವು ಇದೆ. ಆದರೆ, ಜೀವನಕ್ಕೆ ತೊಂದರೆ ಆಗದಂತೆ ಅಪ್ಪ ವ್ಯವಸ್ಥೆ ಮಾಡಿದ್ದಾರೆ. ಆದರೆ, ನಟನಾಗಿ ನಾನು ಏನಾದರೂ ಸಾಬೀತು ಮಾಡಬೇಕು ಅನ್ನೋ ಹಠ, ಕನಸು, ಗುರಿ ಇದೆ.