ನನ್ನ ಗೋಲ್ಡನ್‌ ಅಭಿಮಾನಿಗಳಿಗೆ ಖುಷಿ ಕೊಡೋ ಚಿತ್ರ ಕೃಷ್ಣಂ ಪ್ರಣಯ ಸಖಿ : ನಟ ಗಣೇಶ್‌

| Published : Aug 15 2024, 01:47 AM IST / Updated: Aug 15 2024, 03:57 AM IST

ನನ್ನ ಗೋಲ್ಡನ್‌ ಅಭಿಮಾನಿಗಳಿಗೆ ಖುಷಿ ಕೊಡೋ ಚಿತ್ರ ಕೃಷ್ಣಂ ಪ್ರಣಯ ಸಖಿ : ನಟ ಗಣೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೇಕ್ಷಕರ ಮುಂದೆ ಬಂದಿರುವ ಕೃಷ್ಣಂ ಪ್ರಣಯ ಸಖಿ ಚಿತ್ರದ ಬಗ್ಗೆ ನಟ ಗಣೇಶ ಅವರು ಹೇಳಿರುವ ಮಾತುಗಳು.

- ಆರ್. ಕೇಶವಮೂರ್ತಿ

ಈ ಸಿನಿಮಾ ನಿಮಗೆ ಯಾಕೆ ವಿಶೇಷ?

ನನ್ನ ಅಭಿಮಾನಿಗಳನ್ನು ಭೇಟಿ ಮಾಡಿಸಿದ ಸಿನಿಮಾ. ಸಂಭ್ರಮ ಮತ್ತು ಗೆಲುವಿನ ಭರವಸೆಯಲ್ಲಿ ನಾನು ಮತ್ತೆ ನನ್ನ ಅಭಿಮಾನಿಗಳನ್ನು ಕಂಡಿದ್ದು ಈ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಿಂದ. ಇನ್ನೂ ಕಳೆದ ಎರಡ್ಮೂರು ವರ್ಷಗಳಿಂದ ಕನ್ನಡದಲ್ಲಿ ಮೆಲೋಡಿ ಹಾಡುಗಳು ಸದ್ದೇ ಮಾಡಿಲ್ಲ. ಅದರಲ್ಲೂ ಸಿನಿಮಾ ಬಿಡುಗಡೆಗೂ ಮೊದಲು ಹಾಡುಗಳು ಹಿಟ್‌ ಆಗಿಲ್ಲ. ಈ ಹೊತ್ತಿನಲ್ಲಿ ನಮ್ಮ ಚಿತ್ರದ ಹಾಡುಗಳೇ ದೊಡ್ಡ ಹಿಟ್‌ ಆಗಿವೆ. 

ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?

ನನ್ನ ಹೆಸರು ಗಣೇಶ. ಆದರೆ, ತೆರೆ ಮೇಲೆ ನಾನು ಪಕ್ಕಾ ಕೃಷ್ಣ. ಎಲ್ಲರಿಗೂ ಪ್ರೀತಿ ಹಂಚೋ ಮುದ್ದು ಹುಡುಗನ ಪಾತ್ರ ನನ್ನದು.

ಕತೆ ಬಗ್ಗೆ ಹೇಳುವುದಾದರೆ? ಕತೆಯ ವಿಶೇಷತೆಗಳೇನು?

ತುಂಬು ಕುಟುಂಬದ, ದೊಡ್ಡ ಮನೆಯ ಹುಡುಗನ ಕತೆಯನ್ನು ನೀವು ನೋಡುತ್ತೀರಿ. ಚಿತ್ರದ ಮೊದಲ ಭಾಗದಲ್ಲಿ ಕುತೂಹಲ ಹುಟ್ಟಿಸುತ್ತಾ, ವಿರಾಮದ ಹೊತ್ತಿಗೆ ಸಿನಿಮಾ ನೋಡುವ ಪ್ರೇಕ್ಷಕನೇ ಕತೆಯಲ್ಲಿ ಬರುವ ಕುಟುಂಬದವನಾಗುತ್ತಾನೆ. ಚಿತ್ರಕಥೆ ಹಾಗೂ ಪಾತ್ರಧಾರಿಗಳ ಸಂಯೋಜನೆ ಹೊಸತನದಿಂದ ಕೂಡಿದೆ. ಇದೇ ಚಿತ್ರದ ವಿಶೇಷತೆ.

ಈ ಸಿನಿಮಾ ಶುರುವಾದಾಗ ನಿಮಗೆ ಇದ್ದ ಅಭಿಪ್ರಾಯ ಏನು?

ಒಂದು ಫ್ಯಾಮಿಲಿ ಮನರಂಜನೆಯ ಸಿನಿಮಾ ಮಾಡುತ್ತಿದ್ದೇವೆ ಅನಿಸಿತು. ಆದರೆ, ಯಾವಾಗ ಹಾಡುಗಳು ಬಿಡುಗಡೆಗೊಂಡು ಹೊರ ದೇಶಗಳಲ್ಲೂ ಹಾಡುಗಳಿಗೆ ರೀಲ್ಸ್‌ ಮಾಡಕ್ಕೆ ಶುರು ಮಾಡಿದರೋ ಸಕ್ಸಸ್‌ ಅನ್ನೋದು ನಾವು ಮಾಡೋದಲ್ಲ, ಅದೇ ಆಗೋದು ಅಂತ ಮತ್ತೆ ಸಾಬೀತು ಆಯಿತು.

ಈ ಚಿತ್ರವನ್ನು ಪ್ರೇಕ್ಷಕರು ನೋಡುತ್ತಾರೆ ಎನ್ನುವ ನಂಬಿಕೆ ಇದೆಯೇ?

ಖಂಡಿತಾ ಇದೆ. ಹಾಡುಗಳಿಗಿಂತ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಗೆಲ್ಲಿಸುತ್ತಾರೆ. ಕ್ರೈಮ್‌, ಡಾರ್ಕ್‌ ಶೇಡ್‌ ಸಿನಿಮಾಗಳೇ ಹೆಚ್ಚು ತುಂಬಿರುವ ಹೊತ್ತಿನಲ್ಲಿ ಕಿವಿ ಮತ್ತು ಮನಸ್ಸಿಗೆ ಇಂಪಾಗಿರುವ ಕತೆ, ಹಾಡು, ಸಿನಿಮಾ ಬೇಕಿದೆ. ಹೀಗಾಗಿ ‘ಕೃಷ್ಣಂ ಪ್ರಣಯ ಸಖಿ’ ಪ್ರೇಕ್ಷಕನ ಮನಸ್ಸು ತೃಪ್ತಿಪಡಿಸುವ ಚಿತ್ರ.

ಚಿತ್ರದ ಪ್ಲಸ್‌ ಪಾಯಿಂಟ್‌ಗಳೇನು?

ಹಾಡು, ಕೌಟುಂಬಿಕ ಮನರಂಜನೆ, ಕಲರ್‌ಫುಲ್‌, ಪ್ಲೆಸೆಂಟ್‌ ಹಾಗೂ ಒಂದು ಫ್ಯಾಮಿಲಿ, ಕಾಮಿಡಿ, ರೊಮ್ಯಾಂಟಿಕ್‌ ಕತೆಯನ್ನು ಹೀಗೂ ಹೇಳಬಹುದಾ ಎನ್ನುವ ತಿರುವುಗಳೇ ಚಿತ್ರದ ಪ್ಲಸ್‌ ಪಾಯಿಂಟ್‌ಗಳು. ಬಾಕ್ಸ್‌

ನನ್ನ ಅಭಿಮಾನಿಗಳು ಚಿನ್ನದ ಮನುಷ್ಯರು: ಗಣೇಶ್‌

ಅಭಿಮಾನಿಗಳು ನನಗೆ ಗೋಲ್ಡನ್‌ ಸ್ಟಾರ್‌ ಪಟ್ಟ ಕೊಟ್ಟಿದ್ದಾರೆ. ಆ 14ರಂದು 21 ಪೇಯ್ಡ್‌ ಪ್ರೀಮಿಯರ್‌ ಶೋಗಳು ಹೌಸ್‌ ಫುಲ್‌ ಆಗಿದ್ದು ನೋಡಿದರೆ ನಿಜವಾದ ಗೋಲ್ಡನ್‌ ಹೀರೋಗಳು ನನ್ನ ಅಭಿಮಾನಿಗಳು. ನಿರ್ಮಾಪಕರನ್ನು ಅನ್ನದಾತರು ಎಂದು ಡಾ ರಾಜ್‌ಕುಮಾರ್‌ ಕರೆದಂತೆ ನಾನು ನನ್ನ ಅಭಿಮಾನಿಗಳನ್ನು ಇನ್ನು ಮುಂದೆ ‘ಚಿನ್ನದ ಅಭಿಮಾನಿಗಳು’ ಅಂತ ಕರೆಯುತ್ತೇನೆ ಎಂದು ಘೋಷಿಸುತ್ತಿದ್ದೇನೆ.