ಸಾರಾಂಶ
ಸಿನಿವಾರ್ತೆ
ಎಂಟು ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಮೆಚ್ಚುಗೆಗೆ ಪಾತ್ರನಾಗಿದ್ದ ಆನೆ ಅರ್ಜುನನ ಸಮಾಧಿಗೆ ದಿಕ್ಕು ದೆಸೆ ಇಲ್ಲದಂತಾಗಿದೆ, ಆತನಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ ಎಂದು ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸ್ಪಂದಿಸಿರುವ ಅಭಿಮಾನಿಗಳು ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆಯಲ್ಲಿರುವ ಅರ್ಜುನನ ಸಮಾಧಿ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲು ಕಲ್ಲುಗಳನ್ನು ತರಿಸುವ ಜತೆಗೆ ತಾತ್ಕಲಿಕವಾಗಿ ಶೆಡ್ ಕೂಡ ನಿರ್ಮಿಸಿದ್ದಾರೆ. ‘ಸಂಬಂಧಪಟ್ಟವರು ಅರ್ಜುನನ ಸ್ಮಾರಕ ನಿರ್ಮಾಣ ಮಾಡದಿದ್ದರೆ ದರ್ಶನ್ ಮಾಡಲಿದ್ದಾರೆ’ ಎಂದೂ ಹೇಳಿದ್ದಾರೆ.
‘ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆಯ ವ್ಯವಸ್ಥೆಯಾಗಲಿ’ ಎಂದು ದರ್ಶನ್ ಎಕ್ಸ್ ಮಾಡಿದ್ದರು.
ದರ್ಶನ್ ಅರ್ಜುನನನ್ನು ಬಹಳ ಇಷ್ಟ ಪಟ್ಟಿದ್ದರು. ಅವರ ‘ಕಾಟೇರ’ ಚಿತ್ರವನ್ನು ಕೂಡ ಅರ್ಜುನನಿಗೆ ಅರ್ಪಿಸಲಾಗಿತ್ತು. ಇದೀಗ ದರ್ಶನ್ ತೀರಿಕೊಂಡಿರುವ ಅರ್ಜುನನಿಗೆ ಗೌರವ ಕೊಡಿಸಲು ಮುಂದಾಗಿದ್ದಾರೆ. ಅವರ ಈ ನಡೆಗೆ ಮೆಚ್ಚುಗೆ ಪ್ರಾಪ್ತವಾಗಿದೆ.