ಸಾರಾಂಶ
- ಪ್ರಿಯಾ ಕೆರ್ವಾಶೆ
ಗೆಲುವಿಲ್ಲದೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಗುವೇ ಮರೆಯಾಗಿದೆ’ ಎಂದು ಇತ್ತೀಚೆಗೆ ರವಿಚಂದ್ರನ್ ಹೇಳಿದ್ದಾರೆ. ಗೆಲುವಿನ ಜೊತೆ ಪ್ರತಿಭಾವಂತ ನಾಯಕಿಯರೂ ಇಲ್ಲಿಂದ ಮರೆಯಾಗುತ್ತಿದ್ದಾರೆ ಎಂಬ ಇನ್ನೊಂದು ಮಾತೂ ಇದರ ಜೊತೆಗೆ ಬಲವಾಗಿ ಕೇಳಿಬರುತ್ತಿದೆ.
ಇದಕ್ಕೆ ಪೂರಕವಾಗಿ ಕನ್ನಡದ ಸಾಲು ಸಾಲು ನಟಿಯರು ತೆಲುಗು, ತಮಿಳು, ಬಾಲಿವುಡ್ ಸಿನಿಮಾಗಳಲ್ಲಿ ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಮಾತಿಗೆ ದೊಡ್ಡ ಸಾಕ್ಷಿಯಾಗಿ ಕಣ್ಮುಂದೆ ಬರುವುದು ರಶ್ಮಿಕಾ ಮಂದಣ್ಣ. ಅವರು ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅವರ ನಟನೆಯ ‘ಛಾವಾ’, ‘ಪುಷ್ಪ 2’, ‘ಅನಿಮಲ್’ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆದ ಬಳಿಕ ‘ಅದೃಷ್ಟವಂತ ನಟಿ’ ಎಂಬ ಕಿರೀಟವೂ ರಶ್ಮಿಕಾ ತಲೆಗೇರಿದೆ.
ಕನ್ನಡದ ಶ್ರೀಲೀಲಾ ಕೂಡ ತೆಲುಗು ಸಿನಿಮಾಗಳಲ್ಲಿ ಗೆಲುವಿನ ನಗೆ ಬೀರಿ ಬಾಲಿವುಡ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಮತ್ತೊಂದೆಡೆ ‘ಸಪ್ತಸಾಗರದಾಚೆ ಎಲ್ಲೋ’ ಸಕ್ಸಸ್ ಬಳಿಕ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ ತಮಿಳು, ತೆಲುಗು ಇಂಡಸ್ಟ್ರಿಗಳಲ್ಲಿ ಉತ್ತಮ ಅವಕಾಶ ಪಡೆಯುತ್ತಿದ್ದಾರೆ. ಚೈತ್ರಾ ಆಚಾರ್ ಸದಭಿರುಚಿಯ ತಮಿಳು ಸಿನಿಮಾಗಳಲ್ಲಿ ನಟಿಸಿ ಪ್ಯಾನ್ ಇಂಡಿಯಾ ಮಟ್ಟಕ್ಕೇರುವ ಭರವಸೆ ಮೂಡಿಸಿದ್ದಾರೆ.
ಆಶಿಕಾ ರಂಗನಾಥ್, ರೆಚೆಲ್ ಡೇವಿಡ್, ಸಪ್ತಮಿ ಗೌಡ, ನಭಾ ನಟೇಶ್ ಹೀಗೆ ಕನ್ನಡದ ಸಾಲು ಸಾಲು ನಟಿಯರು ಪರಭಾಷೆಗಳಲ್ಲಿ ನಟಿಸಿ ಸೈ ಅನಿಸಿಕೊಳ್ಳುತ್ತಿದ್ದಾರೆ. ಇವುಗಳ ನಡುವೆ ಸದ್ಯ ಎದ್ದಿರುವ ಪ್ರಶ್ನೆ, ‘ಹಾಗಿದ್ದರೆ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರಿಗೆ ಬೆಳವಣಿಗೆ ಇಲ್ಲವೇ?’ ಎಂಬುದು.
ಇದಕ್ಕೆ ಉತ್ತರಿಸುವ ನಿರ್ದೇಶಕ ನಾಗಶೇಖರ್, ‘ಕನ್ನಡ ಇಂಡಸ್ಟ್ರಿ ಮೊದಲಿನಿಂದಲೂ ಹೀರೋ ಪ್ರಧಾನವಾಗಿ ಗುರುತಿಸಿಕೊಂಡಿದೆ. ಈಗಲೂ ಆ ಸ್ಥಿತಿ ಬದಲಾಗಿಲ್ಲ. ಇಂದಿಗೂ ಇಲ್ಲಿ ಸಿನಿಮಾ ಮಾಡ್ತೀವಿ ಅಂದಾಕ್ಷಣ ಮೊದಲು ಕೇಳೋದೇ ಹೀರೋ ಯಾರು ಅಂತ, ನಿರ್ದೇಶಕರನ್ನೂ ಇತ್ತೀಚೆಗೆ ಅಷ್ಟಾಗಿ ಮಾನ್ಯ ಮಾಡುತ್ತಿಲ್ಲ. ಹೀಗಿರುವಾಗ ನಮ್ಮ ನಾಯಕಿಯರಿಗೆ ಇಲ್ಲಿ ಸಿಗದ ಗೌರವ, ಹಣ, ಪ್ರತಿಭೆಗೆ ಮಾನ್ಯತೆ ಅಲ್ಲಿ ಸಿಗುತ್ತಿರುವುದಂತೂ ಸತ್ಯ’ ಎನ್ನುತ್ತಾರೆ.
ಚೈತ್ರಾ ಆಚಾರ್ ಅವರು, ‘ಕನ್ನಡದಲ್ಲಿ ನಾಯಕಿಗೆ ಐದು ಲಕ್ಷ ಸಿಗುವಾಗ ಬೇರೆ ಇಂಡಸ್ಟ್ರಿಯಲ್ಲಿ ಹದಿನೈದು ಲಕ್ಷದಿಂದ ಕೋಟಿವರೆಗೆ ದುಡಿಮೆ ಇದೆ. ಹೀಗಿದ್ದಾಗ ಸ್ಯಾಂಡಲ್‌ವುಡ್‌ನಲ್ಲೇ ಗೂಟ ಹಾಕಿಕೊಂಡು ಕೂರಲಿಕ್ಕಾಗಲ್ಲ. ಹಾಗೆಂದು ಇದು ಇಂಡಸ್ಟ್ರಿಗೆ ಮಾಡುವ ಅವಮಾನ ಅಲ್ಲ. ರಶ್ಮಿಕಾ ಮಂದಣ್ಣ ಅವರಿಗೆ ಅಲ್ಲಿ ಸಿಗುವ ಗೌರವ, ಮಾನ್ಯತೆಯನ್ನು ನಮ್ಮ ನೆಲದ ಜನ ಕೊಡುತ್ತಿದ್ದಾರಾ, ಖಾಸಗಿ ವಿಚಾರವನ್ನು ಎತ್ತಿಕೊಂಡು ಆಕೆಯನ್ನು ಪದೇ ಪದೇ ನೋಯಿಸುವ ಮಾತನಾಡಿ ಕೊನೆಗೆ ಆಕೆ ತನ್ನ ನೆಲವನ್ನೇ ಕಡೆಗಣಿಸುತ್ತಿದ್ದಾಳೆ ಅನ್ನುವುದು ಹೇಗೆ ಸರಿಯಾಗುತ್ತದೆ’ ಎಂದು ದಿಟ್ಟ ಪ್ರಶ್ನೆ ಎತ್ತುತ್ತಾರೆ.
ಅದೇ ರೀತಿ ಇನ್ನೊಬ್ಬ ನಾಯಕಿ ರೇಚೆಲ್ ಡೇವಿಡ್, ‘ಒಬ್ಬ ನಟಿ ಉತ್ತಮ ಪಾತ್ರ ಗಳಿಕೆಗಾಗಿ ಬೇರೆ ಭಾಷೆಯ ಅವಕಾಶಕ್ಕೆ ಕೈಚಾಚುವುದು ಜಾಣತನ’ ಎನ್ನುತ್ತಾರೆ.
ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನಮ್ಮ ನಟಿಯರಿಗೆ ಸಿಗದ ಮಾನ್ಯತೆ ಪರಭಾಷಾ ಚಿತ್ರಗಳಲ್ಲಿ ಸಿಗುತ್ತಿದೆ. ಅಲ್ಲಿ ಸಿಗುವ ಪ್ರಾಧಾನ್ಯತೆ, ಹಣ ಇಲ್ಲೂ ಸಿಕ್ಕರೆ ನಾವು ಈ ಇಂಡಸ್ಟ್ರಿಯ ಸಿನಿಮಾಗಳಿಗೇ ಆದ್ಯತೆ ನೀಡುತ್ತೇವೆ ಎಂಬ ಮಾತನ್ನೂ ನಟಿಯರು ಹೇಳುತ್ತಾರೆ. ಸದ್ಯ ಹೊಸ ವರ್ಷದಲ್ಲಿ ಒಂದೇ ಒಂದು ಗೆಲುವಿನ ಸಿಂಚನವೂ ಸಿಗದೆ ಕಂಗಾಲಾಗಿರುವ ಸ್ಯಾಂಡಲ್‌ವುಡ್ ಪರಭಾಷೆಗಳ ಸಿನಿಮಾಗಳನ್ನು ನಮ್ಮ ನಾಯಕಿಯರು ಗೆಲ್ಲಿಸುವುದನ್ನು ಮೂಕಪ್ರೇಕ್ಷಕನಂತೆ ನೋಡುತ್ತಿದೆ. ಪ್ರತಿಭೆ ನೆಚ್ಚಿರುವ ಕನ್ನಡ ನಾಯಕಿಯರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮ್ಮ ಸಕ್ಸಸ್ ಓಟ ಮುಂದುವರಿಸಿದ್ದಾರೆ.
ನಾನು ಮನೆಯಲ್ಲಿ ಎದ್ದರೂ ಬಿದ್ದರೂ ಮಾತಾಡೋದು ಕನ್ನಡವನ್ನೇ. ಹಾಗೆಂದು ಬಾವಿಯೊಳಗಿನ ಕಪ್ಪೆಯಂತೆ ಸ್ಯಾಂಡಲ್‌ವುಡ್‌ನಲ್ಲೇ ಇರಲಾಗದು. ಇಲ್ಲಿ ಐದು ಲಕ್ಷ ಸಿಗುವಾಗ ಬೇರೆ ಇಂಡಸ್ಟ್ರಿಯಲ್ಲಿ ಹದಿನೈದು ಲಕ್ಷದಿಂದ ಕೋಟಿವರೆಗೆ ದುಡಿಮೆ ಇದೆ. ಹೊಸ ಅವಕಾಶ, ಉತ್ತಮ ಗಳಿಕೆ ಸಿಕ್ಕರೂ ಭಾಷೆಯ ಕಾರಣವೊಡ್ಡಿ, ಬಿಟ್ಟು ಕೂರುವಷ್ಟು ಮೂರ್ಖರು ನಾವಲ್ಲ.
- ಚೈತ್ರಾ ಆಚಾರ್
ನಾನು ಸದ್ಯ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೀನಿ. ಬೇರೆ ಭಾಷೆಗಳಲ್ಲಿ ನಟಿಸಿ ಬಂದರೆ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಮಾನ್ಯತೆ ಸಿಗುತ್ತೆ.
- ರೇಚೆಲ್ ಡೇವಿಡ್