ಸಾರಾಂಶ
ಮಂಡ್ಯ : ಭೈರಾದೇವಿ ಒಂದು ಉತ್ತಮ ಸಿನಿಮಾ. ಕಷ್ಟಪಟ್ಟು ಒಳ್ಳೆಯ ಚಿತ್ರವನ್ನು ನೀಡಿದ್ದೇವೆ. ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ಯಾವುದೇ ಮುಜುಗರವಿಲ್ಲದೆ ನೋಡಬಹುದಾದ ಸಿನಿಮಾ. ಕನ್ನಡಿಗರು ಚಿತ್ರ ನೋಡಿ ಪ್ರೋತ್ಸಾಹಿಸಿದರೆ ಇನ್ನೂ ಉತ್ತಮ ಚಿತ್ರಗಳನ್ನು ನೀಡುವುದಕ್ಕೆ ಸಾಧ್ಯವಾಗಲಿದೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ತಿಳಿಸಿದರು.
ನಗರದ ಸಂಜಯ ಚಿತ್ರಮಂದಿರಕ್ಕೆ ಭಾನುವಾರ ಭೇಟಿ ನೀಡಿದ ರಮೇಶ್ ಮತ್ತು ರಾಧಿಕಾಕುಮಾರಸ್ವಾಮಿ ಒಟ್ಟಿಗೆ ಚಿತ್ರ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಉತ್ತಮ, ಗುಣಾತ್ಮಕ ಹಾಗೂ ಸದಭಿರುಚಿಯ ಚಿತ್ರವನ್ನು ನಿರ್ಮಿಸಿದ್ದೇವೆ. ಒಳ್ಳೆಯ ಚಿತ್ರಗಳನ್ನು ಕನ್ನಡಿಗರು ಸದಾ ಬೆಂಬಲಿಸುವರೆಂಬ ವಿಶ್ವಾಸವಿದೆ. ಭೈರಾದೇವಿ ಎಲ್ಲರ ಮನಮುಟ್ಟುವಂತೆ ಚಿತ್ರಿಸಲಾಗಿದೆ. ಜನರು ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಬೇಕು. ನಿಮ್ಮ ಬೆಂಬಲವಿದ್ದರೆ ಇನ್ನೂ ಒಳ್ಳೆಯ ಚಿತ್ರಗಳನ್ನು ಮಾಡುವುದಕ್ಕೆ ಸ್ಫೂರ್ತಿ, ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಕನ್ನಡ ಸಿನಿಮಾಗಳು ಯಾವ ಭಾಷೆಯ ಸಿನಿಮಾಗಳಿಗೂ ಕಡಿಮೆಯೇನಿಲ್ಲ. ಹೊಸ ನಿರ್ದೇಶಕರು ಕ್ರಿಯಾಶೀಲತೆಯಿಂದ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ. ಅವರ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕಿದೆ. ಯುವ ನಿರ್ದೇಶಕರನ್ನು ಬೆಳೆಸಬೇಕಿದೆ. ಸಿನಿಮಾಗಳನ್ನು ನಿರ್ಮಿಸುವುದಕ್ಕೆ ಜನರೇ ನಿರ್ಮಾಪಕರಿಗೆ ಪ್ರೇರಕ ಶಕ್ತಿ. ಅವರು ಚಿತ್ರಗಳನ್ನು ನೋಡಿ ಸಂತಸಪಟ್ಟರೆ ಚಿತ್ರೋದ್ಯಮದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ನಟ ರಮೇಶ್ ಅರವಿಂದ್ ಮತ್ತು ರಾಧಿಕಾ ಕುಮಾರಸ್ವಾಮಿ ಪ್ರೇಕ್ಷಕರೊಂದಿಗೆ ಕುಳಿತು ಕೆಲಕಾಲ ಚಿತ್ರ ವೀಕ್ಷಿಸಿದರು. ನಂತರ ಹೊರಗೆ ಬಂದಾಗಲೂ ಅಭಿಮಾನಿ ಸಮೂಹ ಅವರನ್ನು ಅಭಿನಂದಿಸಿತು. ರಾಧಿಕಾ ಜೊತೆ ನಿಂತು ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಂತರ ಮಜ್ಜಿಗೆ ವಿತರಣಾ ಕಾರ್ಯಕ್ರಮ ನಡೆಯಿತು.