ದುನಿಯಾ ವಿಜಯ್ ನಟನೆಯ ಬಹು ನಿರೀಕ್ಷೆಯ ಭೀಮ ಸಿನಿಮಾ ಜೂನ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಗಳು ಇವೆ.

ಸಿನಿವಾರ್ತೆ

ದುನಿಯಾ ವಿಜಯ್‌ ನಿರ್ದೇಶಿಸಿ, ನಟಿಸಿರುವ ‘ಭೀಮ’ ಎರಡು ವರ್ಷ ಹಿಂದೆ ಆರಂಭವಾಗಿ ಹಲವು ತಿಂಗಳು ಮೊದಲೇ ಚಿತ್ರೀಕರಣ ಮುಗಿದಿತ್ತು. ಆದರೆ ಬಿಡುಗಡೆ ತಡವಾಗಿದ್ದು ಯಾಕೆ?

ಗಾಂಧಿನಗರ ಅದಕ್ಕೆ ಹತ್ತು ಹಲವು ಕಾರಣ ಕೊಡುತ್ತವೆ. ಅದರಲ್ಲೊಂದು ನಿರ್ಮಾಪಕರು ಈ ಸಿನಿಮಾದ ಸ್ಯಾಟಲೈಟ್‌ ಹಕ್ಕು, ಇನ್ನಿತರ ಹಕ್ಕನ್ನು ಬಿಡುಗಡೆಗೆ ಮೊದಲೇ ಮಾರಾಟ ಮಾಡಬೇಕು ಎಂಬ ಯೋಜನೆ ಹಾಕಿದ್ದು ಎನ್ನುತ್ತವೆ ಮೂಲಗಳು. ‘ಭೀಮ’ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ, ಅದಕ್ಕೆ ತಕ್ಕಂತೆ ನಿರ್ಮಾಪಕರು ಖರ್ಚೂ ಮಾಡಿದ್ದಾರೆ. ಹಾಗಾಗಿ ಸ್ಯಾಟಲೈಟ್ ಹಕ್ಕು ಮಾರಾಟ ಮಾಡುವ ಉದ್ದೇಶ ಚಿತ್ರತಂಡಕ್ಕೆ ಇತ್ತು ಎನ್ನಲಾಗಿದೆ. ಟಿವಿ ಮಂದಿ ಸಿನಿಮಾ ನೋಡಿಯೇ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದರಿಂದ, ಚಿತ್ರತಂಡ ಅದಕ್ಕೆ ಹಿಂದೇಟು ಹಾಕಿದ್ದರಿಂದ ಪ್ರಕ್ರಿಯೆಯೇ ತಡವಾಯಿತು ಎಂದೂ ಮೂಲಗಳು ತಿಳಿಸಿದ್ದಾವೆ. ಸದ್ಯಕ್ಕೆ ಅವೆಲ್ಲವೂ ಬಗೆಹರಿದಿದೆ. ಸ್ಯಾಟಲೈಟ್ ಹಕ್ಕು ಮಾರಾಟ ಮಾತುಕತೆ ಕೂಡ ಕೊನೆಯ ಹಂತದಲ್ಲಿದೆ. ಹಾಗಾಗಿ ಜೂನ್‌ನಲ್ಲಿ ಸಿನಿಮಾ ಬರುವುದು ನಿಶ್ಚಿತ ಎನ್ನುತ್ತವೆ ಗಾಂಧಿನಗರ ಮೂಲಗಳು.

ಈ ಕುರಿತು ದುನಿಯಾ ವಿಜಯ್‌, ‘ಚುನಾವಣೆ ಗದ್ದಲದ ಮಧ್ಯೆ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತ ಅಲ್ಲ ಅನಿಸಿ ನಾವೇ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದೇವೆ. ಒಳ್ಳೆಯ ಸಮಯ ನೋಡಿಕೊಂಡು ಚಿತ್ರವನ್ನು ಥಿಯೇಟರ್‌ಗಳಿಗೆ ತರುತ್ತೇವೆ’ ಎನ್ನುತ್ತಾರೆ.

ನಿರ್ಮಾಪಕ ಕೃಷ್ಣ ಸಾರ್ಥಕ್‌ ಮಾತ್ರ, ‘ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಬಾಕಿ ಇವೆ. ಆ್ಯಕ್ಷನ್‌ ಸನ್ನಿವೇಶಗಳು ಹೆಚ್ಚು ಇರುವ ಕಾರಣಕ್ಕೆ ವಿಎಫ್‌ಎಕ್ಸ್‌ಗೆ ಸಮಯ ತೆಗೆದುಕೊಂಡಿದ್ದೇವೆ. ಜೂನ್‌ ತಿಂಗಳ ಮೊದಲು ಅಥವಾ ಕೊನೆಯ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ’ ಎಂದು ಹೇಳುತ್ತಾರೆ.