ಸಾರಾಂಶ
ಬಿಗ್‌ಬಾಸ್ ಮನೆಯೊಳಗೆ ನಡೆದ ಹೊಡೆದಾಟದಲ್ಲಿ ಸ್ಪರ್ಧಿ ಲಾಯರ್ ಜಗದೀಶ್ ಹೊರಬಿದ್ದಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ‘ಬಿಗ್‌ಬಾಸ್ ಸೀಸನ್ 11’ನಿಂದ ಪ್ರಬಲ ಸ್ಪರ್ಧಿ ಲಾಯರ್ ಜಗದೀಶ್ ಹೊರಬಿದ್ದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ರಂಜಿತ್ ಜೊತೆಗೆ ಹೊಡೆದಾಟ ಮಾಡಿದ ಅವರನ್ನು ವಾರದ ಮಧ್ಯದಲ್ಲೇ ಎಲಿಮಿನೇಶನ್ ಮಾಡಲಾಗಿದೆ. ಅವರ ಜೊತೆಗೆ ಹೊಡೆದಾಟದಲ್ಲಿ ಭಾಗಿಯಾದ ರಂಜಿತ್ ಅವರೂ ಮನೆಯಿಂದ ಆಚೆ ಬಂದಿದ್ದಾರೆ.ಬಿಗ್‌ಬಾಸ್ ಮನೆಯಲ್ಲಿ ಜಗದೀಶ್ ಆರಂಭದಲ್ಲಿ ರಂಜಿತ್ ಹಾಗೂ ಉಗ್ರಂ ಮಂಜು ಜೊತೆ ಜಗಳಕ್ಕೆ ಇಳಿದಿದ್ದರು. ಈ ಮೂವರ ಜಗಳ ತಾರಕಕ್ಕೇರಿತ್ತು. ಸ್ಪರ್ಧಿಗಳ ಮಿತಿ ಮೀರಿದ ವರ್ತನೆಗೆ ಬಿಗ್ ಬಾಸ್‌ನಿಂದ ವಾರ್ನಿಂಗ್ ಬಂತು. ಆಮೇಲೂ ಸುಮ್ಮನಾಗದ ಜಗದೀಶ್ ಮತ್ತೆ ರಂಜಿತ್ ಜೊತೆ ಜಗಳಕ್ಕಿಳಿದು ಗುದ್ದಾಡಿದ್ದಾರೆ. ಇದು ಪರಸ್ಪರ ಹಲ್ಲೆ ಮಾಡುವವರೆಗೂ ಹೋಗಿ ಇಬ್ಬರೂ ಈ ಸಂದರ್ಭ ಹೊಡೆದಾಡಿಕೊಂಡಿದ್ದು, ನಿಯಮ ಉಲ್ಲಂಘನೆಯ ಕಾರಣಕ್ಕೆ ಇಬ್ಬರನ್ನೂ ಮನೆಯಿಂದ ಆಚೆ ಕಳುಹಿಸಲಾಗಿದೆ. ಕನ್ನಡ ಬಿಗ್‌ಬಾಸ್ ಇತಿಹಾಸದಲ್ಲಿ ಜಗಳ ಆಡಿಕೊಂಡು ಮನೆಯಿಂದ ಸ್ಪರ್ಧಿಗಳು ಹೊರಬಿದ್ದ ಎರಡನೇ ಪ್ರಕರಣ ಇದಾಗಿದೆ. ಆದರೆ ಮೂರನೇ ವಾರಕ್ಕೇ ಈ ಮಟ್ಟಿನ ಘರ್ಷಣೆ ನಡೆದಿರುವುದು ಇದೇ ಮೊದಲು. ಈ ಹಿಂದೆ ಹುಚ್ಚ ವೆಂಕಟ್ ಸಹ ಹೊಡೆದಾಡಿಕೊಂಡು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು.
ಈ ಸಲದ ಬಿಗ್‌ಬಾಸ್ ಹಲವು ವಿವಾದಗಳಿಗೆ ತುತ್ತಾಗಿದೆ. ಇದೇ ಕೊನೆಯ ಸೀಸನ್ ಎಂದು ಸುದೀಪ್ ಘೋಷಿಸಿದ್ದಾರೆ. ಮಹಿಳಾ ಆಯೋಗ ಬಿಗ್‌ಬಾಸ್ ವಿರುದ್ಧ ಪ್ರಕರಣ ದಾಖಲಿಸಿದೆ.