ಉತ್ಸಾಹಿ ಯುವ ನಿರ್ದೇಶಕರ ತಂಡದ ಬಿಟಿಎಸ್ ಎಂಬ ಸಿನಿಮಾ : ಹೊಸ ಬಗೆಯ ಪ್ರಚಾರದಲ್ಲಿ

| Published : Nov 04 2024, 12:34 AM IST / Updated: Nov 04 2024, 06:12 AM IST

ಸಾರಾಂಶ

ಉತ್ಸಾಹಿ ಯುವ ನಿರ್ದೇಶಕರ ತಂಡ ಬಿಟಿಎಸ್ ಎಂಬ ಸಿನಿಮಾ ಮಾಡ್ತಿದ್ದಾರೆ. ಇವರ ಪ್ರಚಾರವೂ ವಿಭಿನ್ನವಾಗಿದೆ.

 ಸಿನಿವಾರ್ತೆ

‘ಬಿಟಿಎಸ್‌’.

ಇದು ಐವರು ಸಿನಿಮಾ ವ್ಯಾಮೋಹಿಗಳು ಸೇರಿ ಮಾಡಿರುವ ಚಿತ್ರ. ಇಡೀ ಸಿನಿಮಾದ ಥೀಮ್‌ - ತೆರೆಯ ಹಿಂದಿನ ಕಥೆಗಳು. ಹೀಗಾಗಿ ಈ ಸಿನಿಮಾದ ಟೈಟಲ್ಲೇ ‘ಬಿಹೈಂಡ್‌ ದಿ ಸೀನ್ಸ್‌’ ಅರ್ಥಾತ್‌ ‘ಬಿಟಿಎಸ್‌’.

ಕುಲ್‌ದೀಪ್‌ ಕರಿಯಪ್ಪ, ಸಾಯಿ ಶ್ರೀನಿಧಿ, ರಾಜೇಶ್‌ ಎನ್‌ ಶಂಕದ್‌, ಅಪೂರ್ವ ಭಾರದ್ವಾಜ್‌, ಪ್ರಜ್ವಲ್‌ ರಾಜ್‌ ಎಂಬ ಈ ಕಾಲದ ನಿರ್ದೇಶಕರ ಐದು ಕಥೆಗಳು ಈ ಸಿನಿಮಾದಲ್ಲಿವೆ. ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ಕಾಫಿ, ಸಿಗರೆಟ್‌, ಲೈನ್ಸ್‌’, ‘ಹೀರೋ’, ‘ಬ್ಯಾಕ್ ಬಸ್ಟರ್‌’ ಹಾಗೂ ‘ಸುಮೋಹ’ ಎಂಬ ಕಥೆಗಳು ಈ ಸಿನಿಮಾದಲ್ಲಿವೆ.

ಒಂದೊಂದಕ್ಕಥೆಯೂ ಚಲನಚಿತ್ರ ಎಂಬ ದೊಡ್ಡ ಪರದೆಯ ಹಿಂದಿನ ಕಥೆ ಹೇಳುತ್ತದೆ. ನ.8ಕ್ಕೆ ಈ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಯುವ ಚಿತ್ರತಂಡ ವಿಭಿನ್ನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಈ ಬಗ್ಗೆ ವಿವರ ನೀಡುವ ನಿರ್ದೇಶಕ ಸಾಯಿ ಶ್ರೀನಿಧಿ, ‘ನಾವು ಜನರ ಬಳಿಗೆ ಹೋಗಿ ಅವರು ಕಾಫಿ ಕುಡಿಯುವ, ಸಿಗರೆಟ್‌ ಸೇದುವ ಟೈಮಲ್ಲೇ ಸಿನಿಮಾ ಟೀಸರ್‌ ತೋರಿಸಿ, ಚಿತ್ರದತ್ತ ಸೆಳೆಯುತ್ತಿದ್ದೇವೆ. ಚಾ ಅಂಗಡಿ, ದರ್ಶಿನಿ ಮೊದಲಾದೆಡೆ ಬಿಳಿ ಹಾಳೆಯಲ್ಲಿ ಕ್ಯೂಆರ್‌ ಕೋಡ್‌ ಹಾಕಿ ಗಮನ ಸೆಳೆಯುವ ಟ್ಯಾಗ್‌ಲೈನ್‌ನೊಂದಿಗೆ ಸಿನಿಮಾ ಪ್ರಮೋಶನ್‌ ಮಾಡುತ್ತಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ’ ಎಂದಿದ್ದಾರೆ.

ನಿರ್ದೇಶಕರೇ ತಮ್ಮ ದುಡಿಮೆ, ಸಾಲ, ಸ್ನೇಹಿತರಿಂದ ಹಣ ಪಡೆದು ಈ ಸಿನಿಮಾ ನಿರ್ಮಿಸಿದ್ದಾರೆ ಅನ್ನುವುದು ವಿಶೇಷ.