ಕಾರ್ಯಕರ್ತರಿಗೂ ಹೇಳದೆ ಚೌಟ ನಾಮಪತ್ರ ಏಕೆ?

| Published : Apr 01 2024, 12:47 AM IST / Updated: Apr 01 2024, 06:50 AM IST

ಕಾರ್ಯಕರ್ತರಿಗೂ ಹೇಳದೆ ಚೌಟ ನಾಮಪತ್ರ ಏಕೆ?
Share this Article
  • FB
  • TW
  • Linkdin
  • Email

ಸಾರಾಂಶ

ಏ.4ಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ ಅದಕ್ಕೂ ಮೊದಲೇ ಉಮೇದುವಾರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬಿಜೆಪಿಗರು ಶಾಕ್‌ ಆಗಿದ್ದಾರೆ.

ಬೆಂಗಳೂರು :  ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಪಕ್ಷದ ಮಾತಿಗೆ ತಪ್ಪದೇ ನಡೆಯುವ ನಿಷ್ಠಾವಂತ. ಇದಕ್ಕಾಗಿಯೇ ಅವರಿಗೆ ಟಿಕೆಟ್‌ ದೊರಕಿದೆ. ಆದರೆ, ಟಿಕೆಟ್ ದೊರಕಿದ ನಂತರ ಅವರ ಒಂದು ನಡೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.ಇದಕ್ಕೆ ಕಾರಣ, ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಏ.4ರಂದು ಭಾರಿ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸುತ್ತಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದರು. ಹಾಗಾಗಿ ಏ.4ರ ಮುಹೂರ್ತಕ್ಕಾಗಿ ಎಲ್ಲರೂ ಕಾಯುತ್ತಿದ್ದರು.ಆದರೆ ಕ್ಯಾ.ಬ್ರಿಜೇಶ್‌ ಚೌಟರು ಏಕಾಏಕಿ ಕಳೆದ ಗುರುವಾರ ನಾಮಪತ್ರ ಸಲ್ಲಿಸಿರುವುದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿತು.

 ವೆಬ್‌ಸೈಟ್‌ಗಳಲ್ಲೂ ಸುದ್ದಿ ಪ್ರಚಾರ ಪಡೆಯಿತು.ಇದನ್ನು ನೋಡಿದ ಬಿಜೆಪಿ ಕಾರ್ಯಕರ್ತರಿಗೆ ಶಾಕ್‌ ಉಂಟು ಮಾಡಿತ್ತು. ಮೊದಲಿಗೆ ಯಾರೂ ನಂಬಲಿಲ್ಲ. ನಂತರ ನಿಧಾನವಾಗಿ ವಿಚಾರಿಸಿದಾಗ ಚೌಟ ಅವರು ನಾಮಪತ್ರ ಸಲ್ಲಿಸಿರೋದು ನಿಜ ಅಂತ ಗೊತ್ತಾಯಿತು.ಚೌಟ ಹೀಗ್ಯಾಕೆ ಮಾಡಿದರೂ ಅಂತ ಎಲ್ಲ ಹುಬ್ಬೇರಿಸಿದಾಗ ಗೊತ್ತಾಗಿದ್ದು, ಈಗ ಸಲ್ಲಿಸಿದ್ದು ಸಾಂಕೇತಿಕ ನಾಮಪತ್ರ! ಅಧಿಕೃತವಾಗಿ ಏ. 4ರಂದೇ ಅವರು ನಾಮಪತ್ರ ಸಲ್ಲಿಸುತ್ತಾರೆ ಅಂತ.ಇಷ್ಟಕ್ಕೂ ಪಕ್ಷ ನಿಷ್ಠ ಚೌಟ ಈ ಸಾಂಕೇತಿಕ ನಾಮಪತ್ರ ಸಲ್ಲಿಸಿದ್ದು ಏಕೆ ಅಂತ ಅಂದರೆ, ಎಲ್ಲ ಜೋತಿಷ್ಯ ಹಾಗೂ ಶುಭ ಘಳಿಗೆ ಮಹಾತ್ಮೆ ಅಂತಾರೆ ಅವರ ಆಪ್ತರು.

ಅಮ್ಮ ನಾ ಸೇಲಾದೆ...!

ಮೈಸೂರಿನಲ್ಲಿ ಇಂಥದೊಂದು ಪ್ರಕರಣ ನಡೆದಿದೆ. ಅವರು ಒಂದು ಪಕ್ಷದಲ್ಲಿದ್ದ ಮುಖಂಡರು. ಚುನಾವಣೆ ಬಂತಲ್ಲ. ಹೀಗಾಗಿ ತಮ್ಮದೇ ಪಕ್ಷದವರಿಗೆ ಬೆಂಬಲ ನೀಡಲು ಒಂದಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗ ಅದೇ ಪಕ್ಷದ ಮತ್ತೊಬ್ಬ ಪ್ರಮುಖರು ಅಷ್ಟೊಂದು ಕೊಡಲಾಗುವುದಿಲ್ಲ. ಸ್ವಲ್ಪ ಅಡ್ವಾನ್ಸ್‌ ಇಟ್ಕೊಳ್ಳಿ, ಪಾರ್ಟಿ ಫಂಡು ಬಂದ ನಂತರ ಉಳಿಕೆ ಕೊಡುತ್ತೇನೆ ಎಂದಿದ್ದಾರೆ.

ಇದಕ್ಕೆ, ‘ಇಲ್ಲಾ ಇಲ್ಲಾ, ಕೊಟ್ರೆ ಎಲ್ಲಾ ಒಟ್ಕೆ ಕೊಡಿ, ಇಲ್ಲಾಂದ್ರೆ ಈ ಅಡ್ವಾನ್ಸು ಬೇಡ, ಏನೂ ಬೇಡಾ’ ಎಂದು ನಿರಾಕರಿಸಿದ್ದಾರೆ.

ಈ ವಿಷಯ ಗೊತ್ತಾದ ಕೂಡಲೇ ಮತ್ತೊಂದು ಪಾರ್ಟಿಯ ಮುಖಂಡರು ಅವರನ್ನು ಭೇಟಿ ಮಾಡಿ ಅವರು ಮೊದಲ ಪಾರ್ಟಿಯ ಬಳಿ ಕೇಳಿದ್ದಕ್ಕಿಂತ ಹೆಚ್ಚು ಹಣ ಕೊಟ್ಟಿದ್ದಾರೆ. ಅದನ್ನು ಪಡೆದುಕೊಂಡ ಅವರು, ಅಮ್ಮ ನಾ ಸೇಲಾದೆ, ಆ ಪಾರ್ಟಿಯ ಪಾಲಾದೆ...! ಎಂದು ಗುನುಗುತ್ತಾ ಮರುದಿನವೇ ಪಕ್ಷಾಂತರ ಮಾಡಿದ್ದಾರೆ!.ಜೈ ಡೆಮಾಕ್ರಸಿ...!

ಮಾಜಿ ಸಿಎಂ ಕುಮಾರಸ್ವಾಮಿಗೆ ಚುನಾವಣೆ ಬಂದ್ರೆ ಸಾಕು ಎದೆ ಹಿಡ್ಕೊಳಕ್ಕೆ ಶುರುವಾಗುತ್ತೆ. ಹೋಗಿ ಆಸ್ಪತ್ರೆಗೆ ಅಡ್ಮಿಟ್‌ ಆಯ್ತಾರೆ. ಆಪರೇಷನ್ನೂ ಆಗುತ್ತೆ. ಎರಡೇ ದಿನಕ್ಕೆ ವಾಪಸ್‌ ಬರ್ತಾರೆ. ಮೂರನೇ ದಿನಕ್ಕೆ ರಾಜ್ಯ ಸುತ್ತಾಡೋಕೆ ಹೋಯ್ತಾರೆ.

ಹೀಗಂತ ಡೈಲಾಗ್ ಬಿಸಾಕಿದ ಶ್ರೀರಂಗಪಟ್ಟಣ ಶಾಸಕ ರಮೇಶ್‌ ಬಂಡಿಸಿದ್ದೇಗೌಡರು ಮಂಡ್ಯದಾದ್ಯಂತ ಭಾರಿ ಚರ್ಚೆಗೆ ನಾಂದಿ ಹಾಡವ್ರೇ...

ಸಿದ್ದೇಗೌಡಣ್ಣ ಅಷ್ಟೇ ಸುಮ್ಮನಾಗಿಲ್ಲ. ಈಗ ನಮ್ ಚಲುವಣ್ಣ. ಅವರಿಗೂ ಹಾರ್ಟ್‌ಪ್ರಾಬ್ಲಂ ಐತೆ. ಅವರೋಗಿ ಆಸ್ಪತ್ರೆ ಸೇರ್ಕೊಂಡ್ರೆ ತಿಂಗ್ಳಾನ್‌ಗಟ್ಲೆ ಹೊರಗೆ ಬರೋದೇ ಇಲ್ಲ. ಆದರೆ, ಕುಮಾರಸ್ವಾಮಿ ಮಾತ್ರ ಆಪರೇಷನ್‌ ಆದ್‌ ಎರಡೇ ದಿನಕ್ಕೆ ಹೊರಗೆ ಬಂದು ಪ್ರಚಾರಕ್ಕೂ ಹೋಗುತ್ತಾರೆ. ಇದೇನ್‌ ಎಲೆಕ್ಷನ್‌ ಗಿಮಿಕ್ಕೋ ಅಂತಲೂ ಹೇಳುವ ಮೂಲಕ ಸ್ವಪಕ್ಷೀಯರು, ವಿಪಕ್ಷೀಯರು ಎಲ್ಲರನ್ನು ಮೈಮೇಲೆ ಎಳ್ಕಂಡವರೇ...

ಗರಂ ಆಗಿರುವ ಗೃಹ ಸಚಿವ ಡಾ.ಪರಮೇಶ್ವರ್‌, ಆರೋಗ್ಯದ ಬಗ್ಗೆ ಹೇಳೋಕೆ ರಮೇಶ್‌ ಬಂಡಿಸಿದ್ದೇಗೌಡ ಏನ್‌ ಡಾಕ್ಟ್ರೇನ್ರೀ. ಎಲೆಕ್ಷನ್‌ ಟೈಂನಲ್ಲಿ ಇಂಥಾ ಮಾತೆಲ್ಲ ಏಕ್ರೀ, ಸುಮ್ಕಿರ್ರೀ ಅಂತ ದಬಾಯಿಸಿದರೆ, ಜೆಡಿಎಸ್‌ನ ಸಿ.ಎಸ್.ಪುಟ್ಟರಾಜು ಅವರಂತೂ ಕುಮಾರಣ್ಣನ ಆರೋಗ್ಯ ಕೆಡಲು ಬಂಡಿಸಿದ್ದೇಗೌಡರೇ ಕಾರಣ. ಅವರನ್ನು ಲೀಡರ್ ಮಾಡಲು ಕುಮಾರಣ್ಣ ಮುಂಜಾನೆ 4 ಗಂಟೆವರೆಗೆ ಹಳ್ಳಿಗಳನ್ನ ಸುತ್ತೀ ಆಗ ಅಂಬರೀಶ್‌ ವಿರುದ್ಧ ಗೆಲ್ಲಿಸಿದ್ರಲ್ಲ. ಅವತ್ತಿನಿಂದಲೇ ಕುಮಾರಸ್ವಾಮಿ ಆರೋಗ್ಯ ಕೆಟ್ಟೋ ಯ್ತು ಅಂತ ಕೆಂಡಾಮಂಡಲರಾಗಿದ್ರು.

ನೋಡಿ... ಚುನಾವಣೆ ಬಂತು ಅಂದ್ರೆ ಯಾರ್ಯಾರ ಆರೋಗ್ಯ ಕೆಡಲು ಯಾರ್ಯಾರು ಕಾರಣರಾಗಿದ್ದರು ಅಂತ ವಿಷಯ ವಿಚಾರಿಸದೆಯೂ ಹೊರಬೀಳ್ತದೆ!