ಸಾರಾಂಶ
ಡೇರ್ ಡೆವಿಲ್ ಮುಸ್ತಾಫಾ ಸಿನಿಮಾಕ್ಕೆ 1 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಚಿತ್ರದ ಸಂಪೂರ್ಣ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆ ಬರಹಗಳ ಪುಸ್ತಕ ಬಿಡುಗಡೆಯಾಗುತ್ತಿದೆ.
ಸಿನಿವಾರ್ತೆ : ಪೂರ್ಣಚಂದ್ರ ತೇಜಸ್ವಿ ಕೃತಿ ಆಧರಿತ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ತೆರೆಗೆ ಬಂದು ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳುಳ್ಳ ‘ಡೇರ್‌ಡೆವಿಲ್ ಮುಸ್ತಾಫಾ- ಸಂಪೂರ್ಣ ಚಿತ್ರಕತೆ ಮತ್ತು ಆಯ್ದ ವಿಮರ್ಶೆಗಳು’ ಕೃತಿಯನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ. ಮೇ 19ರಂದು ನಾಲ್ಕು ಗಂಟೆಗೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ನಿರ್ದೇಶಕ ಶಶಾಂಕ್ ಸೋಗಲ್, ‘ಅಕಾಡೆಮಿಕ್ ದೃಷ್ಟಿಯಿಂದ ಸಿನಿಮಾ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಈ ಕೃತಿ ಪ್ರಕಟಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ‘ನಾವು ಒಂದಿಷ್ಟು ಮಂದಿ ಕನ್ನಡದ ಉತ್ತಮ ಕೃತಿಗಳನ್ನು ಸಿನಿಮಾ ಮಾಡುವ ಹುಮ್ಮಸ್ಸಿನಲ್ಲಿದ್ದೇವೆ. ಮೊದಲ ಸಿನಿಮಾದಿಂದ ಹುಟ್ಟಿದ ಜನರ ನಿರೀಕ್ಷೆ ಹುಸಿ ಮಾಡದಂತೆ ಸಿನಿಮಾ ಮಾಡುವ ಸವಾಲು ನಮ್ಮ ಮುಂದಿದೆ’ ಎಂದೂ ಶಶಾಂಕ್ ಹೇಳಿದ್ದಾರೆ.