ಸಾರಾಂಶ
ಚಿತ್ರ ನಟ ದರ್ಶನ್ ತೂಗುದೀಪ ಸಿನಿಮಾ ಕ್ಷೇತ್ರಕ್ಕೆ ಬಂದು 25 ವರ್ಷ ತುಂಬಿರುವ ಹಿನ್ನೆಲೆ ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾಗಿ ಫೆ.17 ಸಂಜೆ 5 ಗಂಟೆಗೆ ಡಿ-25 ಬೆಳ್ಳಿ ಪರ್ವ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ೫೦ಕ್ಕೂ ಹೆಚ್ಚು ನಟ-ನಟಿಯರ ಆಗಮನ
ಕನ್ನಡಪ್ರಭ ವಾರ್ತೆ, ಮಂಡ್ಯ
ಚಿತ್ರ ನಟ ದರ್ಶನ್ ತೂಗುದೀಪ ಅವರು ಸಿನಿಮಾ ಕ್ಷೇತ್ರಕ್ಕೆ ಬಂದು 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾಗಿ ಫೆ.೧೭ ಸಂಜೆ ೫ ಗಂಟೆಗೆ ಡಿ-೨೫ ಬೆಳ್ಳಿ ಪರ್ವ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ದರ್ಶನ್ ಅಭಿಮಾನಿ ಇಂಡುವಾಳು ಸಚ್ಚಿದಾನಂದ ಹೇಳಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಚಿಕ್ಕಮಗಳೂರು ಗೌರಿಗದ್ದೆ ವಿನಯ್ ಗುರೂಜಿ ಅವರು ಸೇರಿದಂತೆ ನಾಡಿನ ಸಾಧು, ಸಂತರು ಸಾನಿಧ್ಯ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ೫೦ಕ್ಕೂ ಹೆಚ್ಚು ನಟ, ನಟಿಯರು ಆಗಮಿಸಲಿದ್ದಾರೆ, ಇವರು ದರ್ಶನ್ ಅಭಿನಯದ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡುವರು, ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಆಗಮಿಸುವ ನಿರೀಕ್ಷೆ ಇದೆ.
ಜತೆಗೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸೇರಿದಂತೆ ವಿವಿಧ ಸಂಗೀತ ನಿರ್ದೇಶಕರು ಹಾಗೂ ಹಿನ್ನೆಲೆ ಗಾಯಕರು ಮನರಂಜನೆ ನೀಡುವರು ಎಂದರು.
ಸಾರ್ವಜನಿಕರಿಗೆ ೨೫ ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ, ೩೦ ರಿಂದ ೪೦ ಸಾವಿರ ಜನ ಸೇರುವ ನಿರೀಕ್ಷೆ ಇದೆ. ಇದಕ್ಕಾಗಿಯೇ ಭವ್ಯ ವೇದಿಕೆ ಸಿದ್ದಗೊಳ್ಳುತ್ತಿದೆ, ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಸಬೇಕಿತ್ತು, ನಮ್ಮ ಮನವಿ ಮೇರೆಗೆ ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ನಾಡು, ನುಡಿ, ಜಲ ರಕ್ಷಣೆಗೆ ದರ್ಶನ್ ಮುಂದಾಗಿದ್ದು, ಈವರೆಗೆ ೫೬ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ತೆರೆ ಕಾಣದ ಡೆವಿಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ್ ಅವರನ್ನು ಹರಸಿ ಅಭಿನಂದಿಸಬೇಕು.
ಸಾಮಾಜಿಕ ಜಾಲತಾಣದಲ್ಲಿ ಪಾಸ್‌ಗಾಗಿ ಕೆಲವು ಮೊಬೈಲ್ ಸಂಖ್ಯೆಗಳನ್ನು ನೀಡಲಾಗಿದೆ, ನಮ್ಮ ನಿರ್ಮಾಪಕತ್ವದಲ್ಲಿ ದರ್ಶನ್ ಅಭಿನಯದ ಚಿತ್ರವೊಂದನ್ನು ನಿರ್ಮಿಸಲಿದ್ದು, ತರುಣ್ ಸುಧೀರ್, ದರ್ಶನ್ ಅವರ ಜೊತೆ ಚರ್ಚಿಸಿ, ಚುನಾವಣೆ ಮುಗಿದ ನಂತರ ಚಿತ್ರ ಆರಂಭಿಸಲಾಗುವುದು ಎಂದು ವಿವರಿಸಿದರು.
ದರ್ಶನ್ ಅಭಿಮಾನಿಗಳಾದ ಸಂತೋಷ್, ಸಂಜಯ್, ರಾಮಚಂದ್ರು, ಮಹೇಶ್ ಗೋಷ್ಠಿಯಲ್ಲಿದ್ದರು.