ಪರಮ್ ನಿರ್ದೇಶನದ, ಧನಂಜಯ ನಟನೆಯ ಕೋಟಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆ ಕುರಿತ ಆಸಕ್ತಿಕರ ವರದಿ.

‘ನಾನು ಸದಾ ಹೊಸ ಕತೆ, ಹೊಸ ಪಾತ್ರಕ್ಕಾಗಿ ಹುಡುಕುತ್ತಾ ಇರುತ್ತೇನೆ. ಅಂಥಾ ಹೊತ್ತಲ್ಲಿ ಪರಮ್‌ ಹೇಳಿದ ಕೋಟಿಯ ಕತೆ ನನ್ನನ್ನು ತೀವ್ರವಾಗಿ ಕಾಡಿತು. ಕೋಟಿ ನನ್ನ ಪಾತ್ರ ಮಾತ್ರವೇ ಅಲ್ಲ. ಈ ಕೋಟಿ ಮಧ್ಯಮ ವರ್ಗದ ಕುಟುಂಬದ ಯಾವ ಹುಡುಗನಲ್ಲೂ ಸಿಗಬಹುದು. ಇದು ಎಲ್ಲರಿಗೂ ಕನೆಕ್ಟ್‌ ಆಗುವ ಸಿನಿಮಾ. ಒಂದು ತೀವ್ರ ಅನುಭವವನ್ನು ಕಟ್ಟಿಕೊಡುವ ಸಿನಿಮಾ.’

- ಡಾಲಿ ಧನಂಜಯ್‌ ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದರು. ‘ಕೋಟಿ’ ಚಿತ್ರದ ಮೇಲೆ ಅವರು ಇಟ್ಟಿರು ನಂಬಿಕೆಯನ್ನು ಅವರ ಮಾತು ಧ್ವನಿಸುತ್ತಿತ್ತು. ಜಿಯೋ ಸ್ಟುಡಿಯೋಸ್‌ ಕನ್ನಡದ ಮುಖ್ಯಸ್ಥರಾದ ಪರಮ್‌ ಕಂಡ ಕನಸು ‘ಕೋಟಿ’ ಸಿನಿಮಾದ ಟ್ರೇಲರ್‌ ಸರೆಗಮ ಕನ್ನಡ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಬಹಳ ಮೆಚ್ಚುಗೆ ಗಳಿಸಿದೆ. ಸಿನಿಮಾ ಜೂ.14ರಂದು ಬಿಡುಗಡೆ ಆಗಲಿದೆ.

ನಿರ್ದೇಶಕ ಪರಮ್‌, ‘ಈ ಸಿನಿಮಾ ನಿರ್ಮಾಣ ಮಾಡಿರುವ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರಿಗೆ ಧನ್ಯವಾದ. ಇದೊಂದು ಕಂಟೆಂಟ್ ಇರುವ ಕಮರ್ಷಿಯಲ್‌ ಸಿನಿಮಾ. ಎಲ್ಲರೂ ಈ ಸಿನಿಮಾ ನೋಡಿ ಸಪೋರ್ಟ್ ಮಾಡಿ ಅಥವಾ ರಚನಾತ್ಮಕವಾಗಿ ಟೀಕೆಯನ್ನಾದರೂ ಮಾಡಿ. ಅದು ನನ್ನ ಮಟ್ಟಿಗೆ, ಜಿಯೋ ಸ್ಟುಡಿಯೋಸ್‌ ಮಟ್ಟಿಗೆ ದೊಡ್ಡ ಶಕ್ತಿಯಾಗಲಿದೆ. ಇನ್ನಷ್ಟು ಸಿನಿಮಾ ಮಾಡುವ ಶಕ್ತಿ ತುಂಬಲಿದೆ’ ಎಂದು ಹೇಳಿದರು.

ನಾಯಕ ನಟಿ ಮೋಕ್ಷ, ಖಳ ಪಾತ್ರಧಾರಿ ರಮೇಶ್ ಇಂದಿರಾ, ತಾರಾ ಇದ್ದರು. ಚಿತ್ರದ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವ ಧನಂಜಯ್‌ ಹಾಗೂ ರಮೇಶ್‌ ಇಂದಿರಾ ನಟನೆಗೆ, ಛಾಯಾಗ್ರಹಣಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.