ಸಾರಾಂಶ
ನಟ ಯುವ ರಾಜ್‌ಕುಮಾರ್ ದಾಂಪತ್ಯ ಕಲಹ ಪ್ರಕರಣದಲ್ಲಿ ಡಾ. ರಾಜ್‌ಕುಮಾರ್ ಮತ್ತು ದೊಡ್ಮನೆ ಕುಟುಂಬದ ವಿರುದ್ಧ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಪರ ವಕೀಲೆ ದೀಪ್ತಿ ಅಯಥಾನ್ ಹರಿಹಾಯ್ದಿದ್ದಾರೆ.
ಬೆಂಗಳೂರು : ನಟ ಯುವ ರಾಜ್‌ಕುಮಾರ್ ದಾಂಪತ್ಯ ಕಲಹ ಪ್ರಕರಣದಲ್ಲಿ ಡಾ. ರಾಜ್‌ಕುಮಾರ್ ಮತ್ತು ದೊಡ್ಮನೆ ಕುಟುಂಬದ ವಿರುದ್ಧ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಪರ ವಕೀಲೆ ದೀಪ್ತಿ ಅಯಥಾನ್ ಹರಿಹಾಯ್ದಿದ್ದಾರೆ. ‘ದೊಡ್ಮನೆಯಲ್ಲೂ ಹೆಣ್ಣುಮಕ್ಕಳಿಗೆ ಈ ಥರ ಟ್ರೀಟ್‌ಮೆಂಟ್ ಸಿಗುತ್ತಾ ಅನ್ನೋದು ದೊಡ್ಡ ಪ್ರಶ್ನೆ’ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಮಾಧ್ಯಮದವರ ಜೊತೆಗೆ ಮಾತನಾಡಿದ ದೀಪ್ತಿ, ‘ಹೆಂಡತಿ ಮೇಲೆ ಅಷ್ಟೊಂದು ಆರೋಪಗಳನ್ನು ಮಾಡುವ ಯುವ ರಾಜ್‌ಕುಮಾರ್ ಅವರು ಶ್ರೀದೇವಿ ಜೊತೆ ಹೇಗೆ ಬಾಳ್ವೆ ಮಾಡುತ್ತಿದ್ದರು? ಯುವ ದೊಡ್ಮನೆ ಹುಡುಗ ಆಗಿದ್ದುಕೊಂಡು ಅವರ ವಕೀಲರು ಹೇಳುವಂತೆ, ಕ್ಯಾರೆಕ್ಟರ್ ಸರಿ ಇಲ್ಲದವಳನ್ನು ಯಾಕೆ ಮದುವೆ ಆಗಬೇಕಿತ್ತು? ಮದುವೆ ಆಗಿ 5 ವರ್ಷ ಅವರೊಂದಿಗೆ ಸಂಸಾರವನ್ನೂ ಮಾಡುವುದು ಹೇಗೆ ಸಾಧ್ಯವಾಯಿತು?’ ಎಂದು ಪ್ರಶ್ನಿಸಿದ್ದಾರೆ.
‘ಕಳೆದ ಡಿಸೆಂಬರ್‌ವರೆಗೆ ಯುವ ಅವರ ಮನೆಯಲ್ಲಿ ಶ್ರೀದೇವಿ ಅವರನ್ನು ಪ್ರೀತಿಯಿಂದಲೇ ನೋಡಿಕೊಂಡಿದ್ದಾರೆ. ಆದರೆ ಅವರು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿ ಡಿಸೆಂಬರ್‌ನಲ್ಲಿ ಬಂದಾಗ ಅವರನ್ನು ಯುವ ಹಾಗೂ ಮನೆಯ ಇತರ ಸದಸ್ಯರು ಮನೆಯಲ್ಲಿ ರೂಮಿಂದ ಆಚೆ ಹಾಕಿದ್ದಾರೆ. ಕೊಡಬೇಕಾದ ಗೌರವ ನೀಡಿಲ್ಲ. ಇದು ಕ್ರೌರ್ಯ. ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಇಡೀ ಮನೆಯವರು ಇದರ ಭಾಗ ಆಗಿದ್ದಾರೆ. ಇನ್ನು ಶ್ರೀದೇವಿ ಜವಾಬ್ದಾರಿ ಹೊತ್ತಿರುವ ಡಾ. ರಾಜ್‌ಕುಮಾರ್ ಅಕಾಡೆಮಿ ಬಗ್ಗೆ ಕುಟುಂಬದವರೇ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಅವರೇ ಅವ್ಯವಹಾರದ ಮಾತು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರವನ್ನು ದಾಂಪತ್ಯದ ವಿರಸದ ವಿಚಾರಕ್ಕೆ ಎಳೆದು ತರುತ್ತಿದ್ದಾರೆ. ಇದು ಶ್ರೀದೇವಿಯ ಮೇಲೆ ಒತ್ತಡ ಹಾಕುವ ಹುನ್ನಾರ’ ಎಂದು ದೀಪ್ತಿ ಹೇಳಿದ್ದಾರೆ.
‘ಒಬ್ಬ ಮಹಿಳೆಯ ಬಗ್ಗೆ ಯುವ ಅವರ ವಕೀಲರು ಇಷ್ಟು ಹೀನಾಯವಾಗಿ ಮಾತನಾಡಿದ್ದು ದೊಡ್ಡ ತಪ್ಪು. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಅವರು ಮಾಧ್ಯಮಗಳ ಮುಂದೆ ಖಾಸಗಿ ವ್ಯಕ್ತಿಗಳನ್ನು ಹೆಸರಿಸಿರುವುದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ಗಂಡ- ಹೆಂಡತಿ ಮಧ್ಯೆ ಅನೇಕ ಸಮಸ್ಯೆ ಬರುತ್ತೆ, ಮಾತುಗಳೂ ಬರುತ್ತವೆ. ಆದರೆ ಇವು ಗೌಪ್ಯವಾಗಿರಬೇಕು. ಈ ಕಾರಣಕ್ಕೆ ಫ್ಯಾಮಿಲಿ ಕೋರ್ಟ್‌ನಲ್ಲೇ ಇಂಥಾ ಸಂಗತಿಗಳನ್ನು ರಹಸ್ಯವಾಗಿಡಲಾಗುತ್ತದೆ. ಹಾಗಿರುವಲ್ಲಿ ಯುವ ಪರ ವಕೀಲರು ಇದನ್ನು ಮಾಧ್ಯಮದ ಮುಂದೆ ಸಾರಿ ಹೇಳಿದ ನಡೆ ಸರಿಯಾದುದಲ್ಲ. ನಾವು ಈ ಬಗ್ಗೆ ಕಾನೂನು ರೀತಿಯಲ್ಲೇ ಹೋರಾಟ ಮಾಡುತ್ತೇವೆ’ ಎಂದಿದ್ದಾರೆ.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))