ಸಾರಾಂಶ
ಸಿನಿವಾರ್ತೆ
‘ನಮ್ಮ ಸಿನಿಮಾದಲ್ಲಿ ಬೆಂಗಳೂರಿಂದ ಹಿಮಾಚಲದ ಸ್ಪಿಟಿ ವ್ಯಾಲಿ ತನಕದ ಜರ್ನಿ ಇದೆ. ಅಪ್ಪ ಮಗನ ನಡುವಿನ ಸಂಘರ್ಷ ಇದೆ. ರೀಲ್ಸ್ ಮಾಡೋ ಹುಡುಗ್ರಿಗೆಲ್ಲ ಪ್ರತಿನಿಧಿಯಂತೆ ನಮ್ಮ ಸಿನಿಮಾದ ನಾಯಕ ಇರುತ್ತಾನೆ’ ಎಂದು ನಿರ್ದೇಶಕ ಹಯವದನ ಹೇಳಿದ್ದಾರೆ.ಇವರ ನಿರ್ದೇಶನದ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸಿನಿಮಾ ಫೆ.21ಕ್ಕೆ ಬಿಡುಗಡೆಯಾಗಲಿದೆ. ‘ಇಲ್ಲಿ ಅರಮನೆ ಅಂದರೆ ಪ್ಯಾಲೇಸ್ ಅಲ್ಲ, ಬದಲಿಗೆ ನಮ್ಮ ಕಂಫರ್ಟ್. ಈ ಸಿನಿಮಾಕ್ಕಾಗಿ ನಾನು 25 ಸಾವಿರ ಕಿಮೀ ಜರ್ನಿ ಮಾಡಿದ್ದೇನೆ. ಪಂಡರಾಪುರ ಪಟ್ಟಣವನ್ನು ಸೊಗಸಾಗಿ ಸೆರೆ ಹಿಡಿದಿದ್ದೇವೆ. ಕಥೆಯಲ್ಲಿ ಬರುವ ನಾಯಕಿಯರು ಮಹಾರಾಷ್ಟ್ರ ಹಾಗೂ ತಮಿಳುನಾಡಿನವರು. ಸೀರಿಯಲ್ ಹಿನ್ನೆಲೆಯವನಾದ ನಾನು ಈ ಸಿನಿಮಾಕ್ಕಾಗಿ 3 ವರ್ಷ ಸೀರಿಯಲ್ ಸ್ಕ್ರಿಪ್ಟ್ ಮುಟ್ಟಿಲ್ಲ’ ಎಂದೂ ಹಯವದನ ಹೇಳಿದ್ದಾರೆ.
ನಾಯಕ ಅಂಜನ್ ನಾಗೇಂದ್ರ, ‘ ನನ್ನ ಲೈಫನ್ನೇ ರಿಸ್ಕ್‌ನಲ್ಲಿಟ್ಟು ಸಿನಿಮಾ ಕ್ಷೇತ್ರಕ್ಕೆ ಬಂದವನು ನಾನು. ಹಾಗಿರುವಾಗ ಸಿನಿಮಾದಲ್ಲಿ ರಿಸ್ಕ್ ತಗೊಳ್ಳೋದು ಯಾವ ಲೆಕ್ಕ. ಈ ಸಿನಿಮಾದಲ್ಲಿ ಚಾಲೆಂಜಿಂಗ್ ಅನ್ನಿಸುವ ಸಾಹಸದ ಸನ್ನಿವೇಶಗಳಲ್ಲಿ ಹಿಂಜರಿಕೆಯಿಲ್ಲದೇ ನಟಿಸಿದ್ದೇನೆ’ ಎಂದರು.
ನಾಯಕಿಯರಲ್ಲೊಬ್ಬರಾದ ವೆನ್ಯಾ ರೈ ಮಂಗಳೂರಿನ ಕಾಲೇಜು ಹುಡುಗಿ. ಈ ಸಿನಿಮಾದಲ್ಲಿ ಮರಾಠಿ ಸೇಲ್ಸ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಬ್ಬ ನಾಯಕಿ ಸಂಜನಾ ದಾಸ್ ಚೂಟಿ ವ್ಲಾಗರ್ ಆಗಿ ನಟಿಸಿದ್ದಾರೆ.
ಪವನ್ ಶಿಮಿಕೇರಿ ಹಾಗೂ ಸಿಂಧೂ ಹಯವದನ ನಿರ್ಮಾಪಕರು.