108 ಸ್ಥಾನ ಗೆದ್ದ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಇನ್ನೇನು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ ಎನ್ನುವ ಹೊತ್ತಿನಲ್ಲೇ ಅದಕ್ಕೆ ರಾಜ್ಯಪಾಲರು ಬ್ರೇಕ್ ಹಾಕಿದ್ದಾರೆ. ಸರ್ಕಾರ ರಚನೆಗೆ ನಿಮ್ಮ ಬಳಿ ಅಗತ್ಯ ಬಹುಮತವೇ ಇಲ್ಲ. ಇದ್ದರೆ, ಅದನ್ನು ತೋರಿಸಿ ಎಂದು ರಾಜ್ಯಪಾಲರು ವಿಜಯ್‌ಗೆ ಸೂಚಿಸಿರುವುದು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.
ಬಲು ಅಪರೂಪ: ಸೋತಪಕ್ಷಗಳಿಂದಲೂ ವಿಜಯ್‌ಪಕ್ಷದ ಪರ ಈಗ ಸೀಟಿ!- ಸರ್ಕಾರ ರಚನೆಗೆ ಅವಕಾಶಕ್ಕೆ ಆಗ್ರಹಚೆನ್ನೈ: ಅಪರೂಪದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡದ ರಾಜ್ಯಪಾಲ ಆರ್.ವಿ.ಅರ್ಲೇಕರ್ ಅವರ ಕ್ರಮಕ್ಕೆ ವಿಜಯ್ ವಿರುದ್ಧ ಚುನಾವಣೆಯಲ್ಲಿ ಸೋತ ಡಿಎಂಕೆ, ಎಂಎನ್‌ಎಂ, ವಿಸಿಕೆ, ಸಿಪಿಐ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ರಾಜ್ಯಪಾಲರು ಜನಾದೇಶಕ್ಕೆ ಅಪಮಾನ ಮಾಡಿದ್ದಾರೆ. ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ. --ಅಣ್ಣಾಡಿಎಂಕೆಯ 28 ಶಾಸಕರಿಂದ ವಿಜಯ್ಪಕ್ಷಕ್ಕೆ ಶೀಘ್ರ ಬೆಂಬಲ?- ಷಣ್ಮುಗಂ ನೇತೃತ್ವದಲ್ಲಿ ರೆಸಾರ್ಟ್‌ಗೆ- ಡಿಸಿಎಂ, ಸಚಿವ ಸ್ಥಾನಕ್ಕಾಗಿ ಬೇಡಿಕೆ?ಚೆನ್ನೈ: ಎನ್‌ಡಿಎ ಮಿತ್ರಪಕ್ಷವಾದ ಅಣ್ಣಾಡಿಎಂಕೆಯ 28 ಶಾಸಕರ ಗುಂಪೊಂದು ಪುದುಚೇರಿ ರೆಸಾರ್ಟ್‌ಗೆ ತೆರಳಿದ್ದು, ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಟಿವಿಕೆ ಮುಖಂಡರು ಈ 28 ಶಾಸಕರ ಜತೆಗೆ ಸಂಪರ್ಕದಲ್ಲಿದ್ದಾರೆ. ಈ ಗುಂಪಿನ ನಾಯಕ ಸಿ.ವಿ.ಷಣ್ಮುಗಂ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು ಇತರೆ ಕೆಲವರಿಗೆ ಸಚಿವ ಹುದ್ದೆಯ ಆಫರ್ ಅನ್ನು ಟಿವಿಕೆ ನೀಡಿದೆ ಎನ್ನಲಾಗಿದೆ.ಒಂದು ವೇಳೆ ಇದು ಖಚಿತವಾದರೆ ಎಂ.ಜಿ.ರಾಮಚಂದ್ರನ್ ಕಟ್ಟಿದ, ಮಾಜಿ ಸಿಎಂ ಜಯಲಲಿತಾ ಬೆಳೆಸಿದ ಎಐಎಡಿಎಂಕೆ ಪಕ್ಷ ಎರಡು ಹೋಳಾಗುವುದು ಖಚಿತ.
--ಗೌರ್‍ನರ್ ಲೆಕ್ಕಾಚಾರ1. ಸರ್ಕಾರ ರಚನೆಗೆ ಹಕ್ಕು ಮಂಡಿಸಿದವರಿಂದ ಬಹುಮತ ಕೇಳುವುದು ರಾಜ್ಯಪಾಲರ ವಿವೇಚನೆ ಒಳಪಟ್ಟಿದ್ದು2. ಸರ್ಕಾರ ರಚಿಸುವಷ್ಟು ಸಂಖ್ಯೆ ಇದೆಯೇ ಎಂಬುದು ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಮನವರಿಕೆಯಾಗಬೇಕು3. ಆ ಹಂತ ದಾಟಿದ ಬಳಿಕ ಸರ್ಕಾರ ರಚನೆಗೆ ಅವಕಾಶ ಪಡೆದ ಪಕ್ಷಗಳು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು--ಚೆನ್ನೈ: ಇತ್ತೀಚಿನ ಇತಿಹಾಸದಲ್ಲೇ ರೋಚಕ ವಿಧಾನಸಭಾ ಚುನಾವಣಾ ಫಲಿತಾಂಶ ನೀಡಿದ ತಮಿಳುನಾಡಿನಲ್ಲಿ ಇದೀಗ ಸರ್ಕಾರ ರಚನೆಯ ಪ್ರಕ್ರಿಯೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 108 ಸ್ಥಾನ ಗೆದ್ದ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಇನ್ನೇನು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ ಎನ್ನುವ ಹೊತ್ತಿನಲ್ಲೇ ಅದಕ್ಕೆ ರಾಜ್ಯಪಾಲರು ಬ್ರೇಕ್ ಹಾಕಿದ್ದಾರೆ. ಸರ್ಕಾರ ರಚನೆಗೆ ನಿಮ್ಮ ಬಳಿ ಅಗತ್ಯ ಬಹುಮತವೇ ಇಲ್ಲ. ಇದ್ದರೆ, ಅದನ್ನು ತೋರಿಸಿ ಎಂದು ರಾಜ್ಯಪಾಲರು ವಿಜಯ್‌ಗೆ ಸೂಚಿಸಿರುವುದು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.
ಸರ್ಕಾರ ರಚನೆ ಸಂಬಂಧ ಬುಧವಾರ ಮೊದಲ ಸಲ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದ ನಟ ವಿಜಯ್, ಗುರುವಾರ ಮತ್ತೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಬಳಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ವಿಶ್ವಾಸಮತ ಸಾಬೀತುಪಡಿಸಲು 2 ತಿಂಗಳ ಅವಕಾಶ ನೀಡುವಂತೆಯೂ ಕೋರಿದರು ಎನ್ನಲಾಗಿದೆ.ಈ ವೇಳೆ ಸರ್ಕಾರ ರಚನೆಗೆ ಅಗತ್ಯವಾದ ಶಾಸಕರ ಬೆಂಬಲ (118 ಶಾಸಕರ ಬೆಂಬಲ) ಪ್ರದರ್ಶಿಸುವಂತೆ ರಾಜ್ಯಪಾಲರು ಕೇಳಿದ್ದಾರೆ. ಅಲ್ಲದೆ ಸರ್ಕಾರ ರಚನೆ ಬಳಿಕ ನಿಮಗೆ ವ್ಯಕ್ತವಾಗಬಹುದಾದ ಬೆಂಬಲವನ್ನು ಈಗಲೇ ಪರಿಗಣಿಸಲಾಗದು. ನಿಮ್ಮನ್ನು ಬೆಂಬಲಿಸುವವರ ಪಟ್ಟಿ ನೀಡಿ. ನಾನು ನಿಯಮಗಳ ಅನುಸಾರವೇ ನಡೆದುಕೊಳ್ಳುತ್ತೇನೆ. ಬೆಂಬಲ ಪತ್ರ ತೋರಿಸಿದರೆ ನಿಮಗೇ ಮೊದಲ ಅವಕಾಶ ನೀಡುತ್ತೇನೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಈ ಹಿಂದೆ ಇದೇ ರೀತಿ ಸರ್ಕಾರ ರಚನೆಗೆ ಅವಕಾಶ ನೀಡಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು ರಾಜ್ಯಪಾಲರ ಕಾರ್ಯ ಕುರಿತು ವಿವರಣೆ ಕೇಳಿದ ಪ್ರಸಂಗಗಳನ್ನು ರಾಜ್ಯಪಾಲರು ಟಿವಿಕೆ ನಿಯೋಗದ ಮುಂದೆ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹೀಗಾಗಿ ಇದೀಗ ವಿಜಯ್ ಪಕ್ಷ ಸಣ್ಣಪುಟ್ಟ ಪಕ್ಷಗಳ ಬೆಂಬಲ ಯಾಚನೆಗೆ ಮುಂದಾಗಿದೆ. ಆದರೆ ಒಂದು ವೇಳೆ ಬಹುಮತಕ್ಕೆ ಅಗತ್ಯವಾದ 118 ಶಾಸಕರ ಬೆಂಬಲ ಪಡೆಯುವಲ್ಲಿ ವಿಫಲವಾದರೆ ಅತಿದೊಡ್ಡ ಪಕ್ಷವಾದ ತನಗೆ ಸರ್ಕಾರ ರಚನೆಗೆ ಅವಕಾಶ ಕೊಡಲು ರಾಜ್ಯಪಾಲರಿಗೆ ಸೂಚಿಸಬೇಕೆಂದು ಕೋರಿ ವಿಜಯ್ ಪಕ್ಷ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ನ 5 ಶಾಸಕರ ಬೆಂಬಲ ಸಿಕ್ಕರೂ ಬಹುಮತ ಸಾಬೀತುಪಡಿಸಲು(118 ಸ್ಥಾನ) ಇನ್ನೂ 5 ಸ್ಥಾನದ ಕೊರತೆ ಎದುರಿಸುತ್ತಿದೆ.--