ಸಾರಾಂಶ
ಮಾ.15ಕ್ಕೆ ಹೈಡ್ ಆ್ಯಂಡ್ ಸೀಕ್ ಸಿನಿಮಾ ಬಿಡುಗಡೆ, ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ.
ಕನ್ನಡಪ್ರಭ ಸಿನಿವಾರ್ತೆ
ಅನೂಪ್ ರೇವಣ್ಣ ಹಾಗೂ ಧನ್ಯಾ ರಾಮ್‌ಕುಮಾರ್ ನಟನೆಯ ‘ಹೈಡ್ ಆ್ಯಂಡ್ ಸೀಕ್’ ಚಿತ್ರದ ಟ್ರೇಲರನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ಮಾರ್ಚ್ 15ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.ಈ ವೇಳೆ ಮಾತನಾಡಿದ ನಾಯಕ ಅನೂಪ್ ರೇವಣ್ಣ, ‘ಇಂಜಿನಿಯರಿಂಗ್ ಹಿನ್ನೆಲೆಯ ನಮ್ಮ ನಿರ್ದೇಶಕರು ಸಿನಿಮಾದ ಪ್ರತೀ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರ ಸಿನಿಮಾ ಫ್ರೇಮಿಂಗ್, ಪ್ಲಾನಿಂಗ್ ಎರಡೂ ಸೊಗಸಾಗಿದ್ದವು’ ಎಂದರು.
ನಾಯಕಿ ಧನ್ಯಾ ರಾಮ್‌ಕುಮಾರ್, ‘ಈ ಸಿನಿಮಾ ಶೀರ್ಷಿಕೆ ನೋಡಿದರೆ ನನಗೆ ಬಾಲ್ಯ ನೆನಪಾಗುತ್ತದೆ. ಚಿತ್ರದಲ್ಲಿ ಹಾಸಿನಿ ಎಂಬ ಚಿಯರ್‌ಫುಲ್ ಹುಡುಗಿ ಪಾತ್ರ’ ಎಂದರು. ನಿರ್ದೇಶಕ ಪುನೀತ್ ನಾಗರಾಜು, ‘ಚಿತ್ರದ ಸಂಯೋಜನೆ ವಿಭಿನ್ನವಾಗಿದೆ. ಮೊದಲ ಭಾಗದಲ್ಲಿ ಬಂದ ಸನ್ನಿವೇಶಗಳು ಎರಡನೇ ಭಾಗದಲ್ಲೂ ಬರುತ್ತವೆ. ಆದರೆ ಪರಿಣಾಮ ವಿಭಿನ್ನವಾಗಿರುತ್ತದೆ’ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ರವಿಕಾಂತೇ ಗೌಡ, ಮಾಜಿ ಸಚಿವ ಎಚ್ ವಿಶ್ವನಾಥ್, ಮಾಜಿ ಸಚಿವ ಹೆಚ್ ಎಂ ರೇವಣ್ಣ, ನಟ ಧೀರೇನ್ ರಾಮ್‌ಕುಮಾರ್, ನಿರ್ಮಾಪಕ ವಸಂತ ಕುಲಕರ್ಣಿ, ಕಲಾವಿದ ಸೂರಜ್, ವಿಶ್ವನಾಥ್, ಸಂಗೀತ ನಿರ್ದೇಶಕ ಸ್ಯಾಂಡಿ ಹಾಜರಿದ್ದರು.