ಹೊಸ ಪೇಟೆಯಲ್ಲಿ ಯುವ ಸಂಭ್ರಮ

| Published : Mar 26 2024, 01:16 AM IST / Updated: Mar 26 2024, 03:58 PM IST

ಸಾರಾಂಶ

ಮಾರ್ಚ್‌ 29ಕ್ಕೆ ತೆರೆ ಕಾಣುತ್ತಿರುವ ಯುವ ರಾಜ್‌ಕುಮಾರ್‌ ನಟನೆಯ ಯುವ ಚಿತ್ರದ ಯುವ ಸಂಭ್ರಮ ಹೊಸಪೇಟೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಕನ್ನಡಪ್ರಭ ಸಿನಿವಾರ್ತೆ

ಹೊಸಪೇಟೆ ಪುನೀತ್ ರಾಜ್‌ಕುಮಾರ್ ಅವರ ಅಚ್ಚುಮೆಚ್ಚಿನ ಊರು. ಈ ಬಗ್ಗೆ ಹಲವು ಬಾರಿ ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಹೇಳಿಕೊಂಡಿದ್ದಾರೆ. 

ಹೀಗೆ ಪುನೀತ್ ಅವರ ಅಚ್ಚುಮೆಚ್ಚಿನ ಊರಿನಲ್ಲಿ ಯುವ ರಾಜ್‌ಕುಮಾರ್ ನಟನೆಯ ‘ಯುವ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಿತು. 

ಚಿತ್ರತಂಡದ ಮಾತಿನ ನಡುವೆ ನಟಿಯರಾದ ಭಾವನಾ ರಾವ್ ಹಾಗೂ ನಿಶ್ವಿಕಾ ನಾಯ್ಡು ಅವರ ನೃತ್ಯ , ಗಾಯಕ ವಿಜಯ್ ಪ್ರಕಾಶ್ ಅವರ ಗಾಯನ ಕಾರ್ಯಕ್ರಮವು ‘ಯುವ ಸಂಭ್ರಮ’ಕ್ಕೆ ಮತ್ತಷ್ಟು ಮೆರಗು ತಂದು ಕೊಟ್ಟಿತು. 

ವೇದಿಕೆ ಮೇಲೆ ಬಂದ ಯುವ ರಾಜ್‌ಕುಮಾರ್ ಚಿತ್ರದ ಕುರಿತು ಮಾತಾಡುವ ಮೊದಲು ಪುನೀತ್ ರಾಜ್‌ಕುಮಾರ್ ಅವರ ಚಿತ್ರದ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. 

ವಿಶೇಷ ಎಂದರೆ ಚಿತ್ರದಲ್ಲಿ ನಾಯಕನ ತಂದೆ, ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಧಾರಾಣಿ ಹಾಗೂ ಅಚ್ಯುತ್ ಕುಮಾರ್ ಅವರು ವೇದಿಕೆ ಮೇಲೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ಎಲ್ಲರ ಶಿಳ್ಳೆ ಹಾಗೂ ಚಪ್ಪಾಳೆಗೆ ಕಾರಣವಾಯಿತು. 

ನಟ ಯುವ ರಾಜ್‌ಕುಮಾರ್ ಮಾತನಾಡಿ, ‘ನನ್ನ ಹಿಂದಿರುವ ಶಕ್ತಿ ನನ್ನ ಚಿಕ್ಕಪ್ಪ (ಪುನೀತ್ ರಾಜ್ ಕುಮಾರ್). ಅವರಿಂದಲೇ ನಾನು ಇವತ್ತು ಇಂಥ ದೊಡ್ಡ ವೇದಿಕೆ ಮೇಲೆ ನಿಂತಿದ್ದೇನೆ. 

ಸಾಕಷ್ಟು ರೀತಿ ತಯಾರಿ ಮಾಡಿಕೊಂಡೆ ಈ ಚಿತ್ರದಲ್ಲಿ ನಟಿಸಿದ್ದೇನೆ. ಯಾಕೆಂದರೆ ಯಾವುದೇ ತಯಾರಿ ಇಲ್ಲದೆ ನಿಮ್ಮ ಮುಂದೆ ಬರಬಾರದು ಅಂದುಕೊಂಡಿದ್ದೆ. 

ಹೀಗಾಗಿ ಪೂರ್ವ ತಯಾರಿ ಮಾಡಿಕೊಂಡೆ ‘ಯುವ’ ಚಿತ್ರದಲ್ಲಿ ನಟಿಸಿದ್ದೇನೆ. ಮಾರ್ಚ್ 29ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಎಂದಿನಂತೆ ನಮ್ಮ ಮೇಲೆ ಇರಲಿ. ಸಿನಿಮಾ ನೋಡಿ. ನಾವು ನಿಮ್ಮಿಂದಲೇ ಹೊರತು, ನಿಮ್ಮ ಹೊರತಾಗಿ ನಾವು ಏನೂ ಇಲ್ಲ. 

ಚಿತ್ರದಲ್ಲಿ ನಟಿಸಿರುವ ಪೋಷಕ ಕಲಾವಿದರು ಹಾಗೂ ತಂತ್ರಜ್ಞಾನರ ನೆರವಿನಿಂದ ‘ಯುವ’ ಸಿನಿಮಾ ನಮ್ಮ ನಿರೀಕ್ಷೆಯಂತೆ ಅದ್ದೂರಿಯಾಗಿ ಮೂಡಿ ಬಂದಿದೆ’ ಎಂದರು. 

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತನಾಡಿ, ‘ಯುವ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಆಗಲು ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕಾರಣ. 

ಯುವ ರಾಜ್‌ಕುಮಾರ್ ಅವರನ್ನು ಹೊಂಬಾಳೆ ಫಿಲಮ್ಸ್ ಸಂಸ್ಥೆಯಲ್ಲಿ ಲಾಂಚ್ ಮಾಡಬೇಕೆಂಬುದು ಪುನೀತ್ ರಾಜ್‌ಕುಮಾರ್ ಅವರ ಆಸೆಯಾಗಿತ್ತು. ಅಪ್ಪು ಅವರ ಆಸೆಯಂತೆ ತುಂಬಾ ಜವಾಬ್ದಾರಿಯಿಂದ ಯುವ ರಾಜ್‌ಕುಮಾರ್ ಅವರನ್ನು ಈ ಚಿತ್ರದಲ್ಲಿ ಲಾಂಚ್ ಮಾಡಿದ್ದೇವೆ.

ಎಲ್ಲ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗುವ ಕಥೆಯನ್ನು ಈ ಚಿತ್ರದ ಮೂಲಕ ಹೇಳಿದ್ದು ಇದೊಂದು ಪವರ್ ಪ್ಯಾಕ್ ಸಿನಿಮಾ ಎಂಬುದನ್ನು ನಾನು ಭರವಸೆ ನೀಡುತ್ತೇನೆ’ ಎಂದರು. 

ರಾಘವೇಂದ್ರ ರಾಜ್‌ಕುಮಾರ್ ಅವರು ಮಾತನಾಡಿ, ‘ಯುವ ರಾಜ್‌ಕುಮಾರ್ ನನ್ನ ಮಗ ಅಲ್ಲ ಅಪ್ಪು ಮಗ. ಅಪ್ಪು ಅವರ ಆಶೀರ್ವಾದದಿಂದಲೇ ಈ ಸಿನಿಮಾ ಆಗಿದೆ. ಈ ಚಿತ್ರವನ್ನು ನೋಡಿ ನೀವೆಲ್ಲ ಗೆಲ್ಲಿಸುತ್ತೀರಿ ಎನ್ನುವ ನಂಬಿಕೆ ನಮಗೆ ಇದೆ. 

ಯುವ ರಾಜ್‌ಕುಮಾರ್ ಅವರು ಅಪ್ಪು ಅವರಲ್ಲಿನ ಗುಣಗಳನ್ನು ಮೈಗೂಡಿಸಿಕೊಂಡಿದ್ದಾನೆ’ ಎಂದರು. ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ರಾಘು ಶಿವಮೊಗ್ಗ, ಜಟ್ಟ ಗಿರಿರಾಜ್, ಹಿತಾ ಚಂದ್ರಶೇಖರ್, ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ ಅವರು ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು.