ಸಾರಾಂಶ
ಕೆಂಜ ಚೇತನ್ ಕುಮಾರ್ ನಿರ್ದೇಶನದ ಹೈಪರ್ ಲಿಂಕ್ ಕಾಮಿಡಿ ಸಿನಿಮಾ ಚೌ ಚೌ ಬಾತ್ ಮಾ.15ರಂದು ಬಿಡುಗಡೆ. ಈ ಸಿನಿಮಾ ಕುರಿತ ಪುಟ್ಟ ಟಿಪ್ಪಣಿ.
ಕೇಂಜ ಚೇತನ್‌ಕುಮಾರ್ ನಿರ್ದೇಶನದ ಹೈಪರ್ ಲಿಂಕ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಚೌಚೌ ಬಾತ್’ ಇಂದು(ಮಾ.15) ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್, ಹಾಡುಗಳು ಜನ ಮೆಚ್ಚುಗೆ ಪಡೆದಿದ್ದು, ಸಿನಿಮಾ ಕುರಿತು ಕುತೂಹಲ ಮೂಡುವಂತೆ ಮಾಡಿದೆ.ಇದೊಂದು ಸುಲಭವಾಗಿ ಊಹಿಸಲಾಗದ ಕತೆ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಈ ಕುರಿತು ನಿರ್ದೇಶಕ ಕೇಂಜ ಚೇತನ್ ಕುಮಾರ್, ‘ಮೂರು ಪ್ರೇಮಕಥಾನಕಗಳು ಒಂದಕ್ಕೊಂದು ಹೊಂದಿಕೊಂಡು ಮುಂದೆ ಸಾಗುತ್ತವೆ. ಹಲವು ತಿರುವುಗಳಿದ್ದು, ಪ್ರೇಕ್ಷಕನಿಗೆ ಅಚ್ಚರಿ ಒದಗಿಸುತ್ತಾ ಸಾಗುವ ಕತೆ ಇದು’ ಎನ್ನುತ್ತಾರೆ. ತಮಿಳು ಸಿನಿಮಾಗಳಲ್ಲಿ ಕಾಣಿಸುತ್ತಿದ್ದ ಹೈಪರ್ ಲಿಂಕ್ ಕಾಮಿಡಿ ವಸ್ತುವನ್ನು ಕನ್ನಡದಲ್ಲಿ ಪರಿಚಯಿಸುತ್ತಿರುವುದಾಗಿ ಚೇತನ್ ಕುಮಾರ್ ತಿಳಿಸಿದ್ದಾರೆ.
ಹಾರಿಜಾನ್ ಮೂವೀಸ್ ನಿರ್ಮಾಣದ ಈ ಚಿತ್ರಕ್ಕೆ ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣ ಇದೆ. ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ತಾರಾಬಳಗದಲ್ಲಿದ್ದಾರೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹಣ, ಕೇಂಜ ಚೇತನ್‌ಕುಮಾರ್ ಸಂಕಲನ ಚಿತ್ರಕ್ಕಿದೆ.