ಇದು ಕೆ ಡ್ರಾಮಾ ಮಾದರಿಯ ಪ್ರೇಮಕಥೆ : ಇಬ್ಬನಿ ತಬ್ಬಿದ ಇಳೆಯಲಿ ನಾಯಕಿ ಅಂಕಿತಾ ಅಮರ್

| Published : Sep 06 2024, 01:05 AM IST / Updated: Sep 06 2024, 04:37 AM IST

ಸಾರಾಂಶ

ಇಬ್ಬನಿ ತಬ್ಬಿದ ಇಳೆಯಲಿ ನಾಯಕಿ ಅಂಕಿತಾ ಅಮರ್ ಸಂದರ್ಶನ.

- ಯಾರು ಈ ಅನಾಹಿತ? ಏನವಳ ಕಥೆ?

ನೆನಪುಗಳ ಜೊತೆಗೆ ಬದುಕುವ ಅಂತರ್ಮುಖಿ ಅನಾಹಿತ. ಸದಾ ಹರಿಯುತ್ತಲೇ ಇರುವ ನೀರಿನಂತೆ ಅವಳ ಕನಸು, ಭಾವನೆಗಳ ಹರಿವು. ನದಿ ಉದ್ಭವವಾಗುವ ಜಾಗ ನಮಗೆ ಹೇಗೆ ಕಾಣಿಸೋದಿಲ್ಲವೋ ಹಾಗೆ ಅವಳ ಒಳಗೆ ಹರಿಯುವ ಭಾವನೆಗಳೂ ಕಾಣಲ್ಲ, ಅವನ್ನೆಲ್ಲ ಕಣ್ಣಲ್ಲೇ ಕಾಪಾಡಿಕೊಂಡು ಬಂದ ಹುಡುಗಿ ಇವಳು. 

- ನಿಮಗೂ ಪಾತ್ರಕ್ಕೂ ಸಾಮ್ಯ ಕಂಡಿತಾ?

ನಮ್ಮಿಬ್ಬರ ಯೋಚನೆ, ವರ್ತನೆಯಲ್ಲಿ ಸಾಮ್ಯ ಇದೆ. ಫೋಟೋ ತೆಗೆಯುವ, ಆದರೆ ಅದನ್ನು ಎಲ್ಲೂ ಶೇರ್‌ ಮಾಡದ ಅವಳ ಮನಸ್ಥಿತಿ ನನ್ನದೂ ಕೂಡ. ನಾನು ಗ್ಯಾಲರಿಯಲ್ಲಿ ಆಗಾಗ ಇಣುಕಿ ನೆನಪುಗಳನ್ನು ಮೆಲುಕು ಹಾಕ್ತೀನಿ. ಅವಳಂತೆ ನನಗೂ ಆಟೋ ರೈಡ್‌ ಬಹಳ ಇಷ್ಟ. ಈ ಹೋಲಿಕೆಯಿಂದಾಗ ಚಿಕ್ಕ ಚಿಕ್ಕ ಸೂಕ್ಷ್ಮ ವಿಚಾರಗಳಲ್ಲೂ ಅವಳನ್ನು ಅರ್ಥ ಮಾಡಿಕೊಳ್ಳೋಕೆ ಸಾಧ್ಯವಾಯಿತು. ಅವಳ ಬಾಲ್ಯದ ಕಥೆ ಕೇಳುತ್ತಾ ಕೇಳುತ್ತಾ ಅನಾಹಿತಳನ್ನು ನನ್ನೊಳಗೆ ತಂದಿದ್ದೇನೆ. 

- ನೀವು ಟೀಮ್‌ ಜೊತೆ ಕನೆಕ್ಟ್‌ ಆದದ್ದು?

ಇನ್‌ಸ್ಟಾದಲ್ಲಿ ನನ್ನ ಫೋಟೋ ನೋಡಿ ನಿರ್ದೇಶಕ ಚಂದ್ರಜಿತ್‌ ಭೇಟಿಯಾದರು. ರಾಧೆ ಪಾತ್ರ ನಂಗೆ ಕೊಡುವ ಯೋಚನೆ ಅವರಿಗಿತ್ತು. ಭೇಟಿ ಮಾಡಲು ಬಂದವರು ವೈಯುಕ್ತಿಕ ವಿವರಗಳ ಬಗ್ಗೆ, ಆಸಕ್ತಿಗಳ ಬಗೆಗೆಲ್ಲ ಮಾತನಾಡಿದ್ದಾರೆ. ಈ ವೇಳೆ ನನ್ನ ಕಣ್ಣು, ಎಕ್ಸ್‌ಪ್ರೆಶನ್‌ನಲ್ಲಿ ಅವರು ಅನಾಹಿತಳನ್ನು ನೋಡಿದ್ರಂತೆ. 

- ನಿಮ್ಮ ಅನುಭವ ಮೀರಿದ ಅನೇಕ ಸಂಗತಿಗಳು ಪಾತ್ರದಲ್ಲಿ ಇದ್ದೇ ಇರುತ್ತದೆ. ಅದಕ್ಕೆ ತೀವ್ರತೆ ಹೇಗೆ ತಂದಿರಿ?

ನಮ್ಮ ಸುತ್ತಲಿನ ವ್ಯಕ್ತಿಗಳು ಇಂಥಾ ಕಡೆ ಆ ಮೂಡ್‌ಗೆ ಹೋಗಲು ಸ್ಫೂರ್ತಿ ಆಗ್ತಾರೆ. ಆದರೆ ಅದನ್ನೂ ಮೀರಿ ಸಹಾಯ ಮಾಡಿದ್ದು ಸಂಗೀತ. ಪ್ರತೀ ಸೀನ್‌ನಲ್ಲಿ ನಟಿಸುವಾಗಲೂ ನಿರ್ದೇಶಕರು ಆ ಮೂಡ್‌ಗೆ ತಕ್ಕಂತೆ ಯಾವ ಮ್ಯೂಸಿಕ್‌ ನನ್ನನ್ನು ಕೆಣಕಬಹುದು ಎಂಬುದನ್ನು ಅರಿತು ಅವವನ್ನೇ ಬ್ಯಾಗ್ರೌಂಡ್‌ನಲ್ಲಿ ಪ್ಲೇ ಮಾಡುತ್ತಿದ್ದರು. ನನ್ನ ಸಂಗೀತದ ಅಭಿರುಚಿಯಿಂದಾಗಿ ಡೈಲಾಗ್‌ ಅನ್ನು ಒಂದು ಟ್ಯೂನ್‌ನಲ್ಲಿ ಸೇರಿಸೋದು ಸಾಧ್ಯವಾಯಿತು. -

 ಸಿನಿಮಾ ನೋಡಿದಾಗ ನಿಮ್ಮ ಫಸ್ಟ್ ರಿಯಾಕ್ಷನ್‌?

ನಾನು ಪ್ರೀಮಿಯರ್‌ ಶೋವನ್ನೇ ನೋಡಿದ್ದು. ಮೊದಲು ನೋಡುವ ಧೈರ್ಯವೇ ಇರಲಿಲ್ಲ. ಅಪ್ಪ, ಅಮ್ಮ, ತಂಗಿಯ ಜೊತೆ ಕೂತು ಸಿನಿಮಾ ನೋಡಿದೆ. ನನ್ನ ತಂದೆ ಅಮರ್‌ ಬಾಬು ಅವರೂ ಸಿನಿಮಾದಲ್ಲಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ನೆನಪುಗಳ ಜೊತೆಗೆ ಸಾಗುವ ಕಾರ್‌ ಡ್ರೈವರ್‌ ಪಾತ್ರ ಅವರದ್ದು. ಅಮ್ಮ, ತಂಗಿ ಇಂಟರ್‌ವಲ್‌ ಟೈಮ್‌ನಲ್ಲಿ ಅತ್ತೇ ಬಿಟ್ಟರು.

- ಈ ಕ್ಷಣದ ಫೀಲ್‌..

ಸಮರ್ಪಣೆ ಅಂತೀವಲ್ಲ, ಹಾಗೆ ಈ ಪಾತ್ರಕ್ಕೆ ನನ್ನಿಂದಾದ ಎಲ್ಲವನ್ನೂ ಸಮರ್ಪಿಸಿದ್ದೇನೆ. ಹೀಗಾಗಿ ಯಾವ ಯೋಚನೆಗಳೂ ಇಲ್ಲ. ತೆರೆಯ ಮೇಲೆ ನನ್ನನ್ನು ನಾನು ನೋಡಿದಾಗ ಅಂತರಾತ್ಮ ಹೇಳಿತು, ಇನ್ನು ನಿನ್ನ ಕೈಯಲ್ಲಿ ಏನೂ ಇಲ್ಲ, ಬಂದದ್ದನ್ನು ಸ್ವೀಕರಿಸು ಅಂತ. ಆ ಮಾತಿಗೆ ತಲೆ ಬಾಗಿದ್ದೇನೆ.ಬಾಕ್ಸ್‌

- ಸಿನಿಮಾದ ಹೈಲೈಟ್ಸ್‌* ಈ ಜನರೇಶನ್‌ನವರು ನೋಡುವ ಕೆ ಡ್ರಾಮಾದ ಮಾದರಿಯಲ್ಲಿ ಈ ಚಿತ್ರದ ಸಿನಿಮಾಟೋಗ್ರಫಿ, ಮ್ಯೂಸಿಕ್‌ ಇದೆ.

* ‘ಅಮೃತವರ್ಷಿಣಿ’, ‘ನಮ್ಮೂರ ಮಂದಾರ ಹೂವೆ’ಯಂಥಾ ಸಿನಿಮಾ ಈ ಕಾಲಘಟ್ಟದಲ್ಲಿ ಬಂದರೆ ಹೇಗಿರುತ್ತೆ ಅನ್ನೋದನ್ನು ನಮ್ಮ ಸಿನಿಮಾ ನಿರೂಪಿಸಿದೆ.

* ಸಾಹಿತ್ಯ, ಫೋಟೋಗ್ರಫಿ, ಸಂಗೀತ, ಕಥೆ ಇಷ್ಟ ಪಡುವವರಿಗೆ ಸಿನಿಮಾ ಇಷ್ಟ ಆಗುತ್ತೆ.

* ಇಲ್ಲಿ ಖಳನಾಯಕರಿಲ್ಲ. ಪರಿಸ್ಥಿತಿಯೇ ಎಲ್ಲಾ.

* ಸಿನಿಮಾವನ್ನು ಸಂಭ್ರಮಿಸಲು ಚಿತ್ರಮಂದಿರಕ್ಕೇ ಬರಬೇಕು ಅನ್ನೋದನ್ನು ಅಕ್ಷರಶಃ ಹೇಳುವ ಸಿನಿಮಾವಿದು.