ಅನಾಹಿತಳೆಂಬ ಕನಸಿನಂಥಾ ಹುಡುಗಿ ಮತ್ತು ಮಹತ್ವಾಕಾಂಕ್ಷಿ ಕ್ರಿಕೆಟಿಗ ಸಿದ್ಧಾರ್ಥ್‌ ನಡುವಿನ ಪ್ರೇಮಕಥೆಯನ್ನು ಈ ಚಿತ್ರ ಬಣ್ಣಿಸುತ್ತದೆ. ಅವರ ಬದುಕಿನ ಏರಿಳಿತಗಳು, ಸವಾಲುಗಳು ಮತ್ತು ಸೂಕ್ಷ್ಮ ಭಾವನೆಗಳನ್ನು ಚಿತ್ರ ಸುಂದರವಾಗಿ ತೋರಿಸುತ್ತದೆ.

ಚಿತ್ರ : ಇಬ್ಬನಿ ತಬ್ಬಿದ ಇಳೆಯಲಿ

ತಾರಾಗಣ : ವಿಹಾನ್‌, ಅಂಕಿತಾ ಅಮರ್‌, ಮಯೂರಿ ನಟರಾಜ್‌,

ನಿರ್ದೇಶನ : ಚಂದ್ರಜಿತ್‌ ಬೆಳ್ಯಪ್ಪ

ರೇಟಿಂಗ್‌ : 3.5

- ಪ್ರಿಯಾ ಕೆರ್ವಾಶೆ 

ಅವಳಿಗೆ ಕವಿತೆ ಬರೆಯೋದು ಇಷ್ಟ, ಅದನ್ನು ಎಲ್ಲರೆದುರು ಓದುವ ಮನಸ್ಸಿಲ್ಲ, ಕೂತಲ್ಲಿ ನಿಂತಲ್ಲಿ ಫೋಟೋ ತೆಗೆಯುತ್ತಾಳೆ, ಯಾರಿಗೂ ತೋರಿಸೋದಿಲ್ಲ. ಇತರರ ಸಣ್ಣತನಕ್ಕೆ, ಉಡಾಫೆಗೆ, ಅಹಂಕಾರಕ್ಕೆ, ದುಷ್ಟತನಕ್ಕೆ ತುಂಬಿದ ಕಂಗಳಲ್ಲಿ ಸಾರಿ ಹೇಳಿ ಮೌನಕ್ಕೆ ಜಾರುತ್ತಾಳೆ. ಈ ಕನಸಿನಂಥಾ ಹುಡುಗಿ ಹೆಸರು ಅನಾಹಿತ. ಯಾರಿಗೂ ತೋರಿಸದೇ ಕಣ್ಣಲ್ಲೇ ಬಚ್ಚಿಟ್ಟಿರುವ ಇವಳ ಕಥೆಗೆ ಮೊದಲ ಪ್ರೇಕ್ಷಕ ಸಿಡ್‌ ಅರ್ಥಾತ್‌ ಸಿದ್ದಾರ್ಥ್‌ ಅಶೋಕ್‌. ಮಹತ್ವಾಕಾಂಕ್ಷೆಯ ಕ್ರಿಕೆಟಿಗ, ಒಳ್ಳೆ ಡ್ಯಾನ್ಸರ್‌, ಫೈಟ್‌ಗೆ ಸದಾ ತಯಾರಿರುವ ಗುಂಡಿಗೆ ಇರೋ ಗಂಡ್ಸು ಇತ್ಯಾದಿ ಮಾಸ್‌ ಎಲಿಮೆಂಟ್‌ ಇರುವ ಸಿಡ್‌ ಲೈಫಲ್ಲಿ ಪರಿಶುದ್ಧ ನದಿಯಂಥಾ ಹುಡುಗಿ ಬಂದಾಗ ಆಗುವ ಬದಲಾವಣೆ, ಆತನ ಬದುಕಿನ ಏರಿಳಿತಗಳು, ಪರಿಸ್ಥಿತಿ ತಂದೊಡ್ಡುವ ಸವಾಲುಗಳು, ನಡು ನಡುವೆ ತಂಗಾಳಿಯಂತೆ ಹಾದು ಹೋಗುವ ಘಟನೆಗಳೇ ಸಿನಿಮಾವಾಗಿದೆ.

‘ರಾಧೆ’, ‘ಅನಾಹಿತ’, ‘ವಿಧಿ’, ‘ಮಳೆ’, ‘ಮ್ಯಾಜಿಕ್‌’ ಮೊದಲಾದ ಪುಟ್ಟ ಪುಟ್ಟ ಕಥೆಗಳಂಥಾ ಲವಲವಿಕೆಯ ಘಟ್ಟಗಳು ಸಿನಿಮಾದಲ್ಲಿವೆ. ಸಂಭಾಷಣೆ ಹಾಡಿನಂತೆ ಒಂದು ರಿದಂನಲ್ಲಿರುವುದು ವಿಶೇಷ.

ವೈನ್‌ ಯಾರ್ಡ್‌, ದ್ರಾಕ್ಷಿ ಗಿಡ, ಅದರ ಜೊತೆ ಪಿಸು ನುಡಿಯುತ್ತಾ, ಆ ಬಳ್ಳಿಗೆ ತನ್ನನ್ನು ಹೋಲಿಸಿ ಭಾವುಕಳಾಗುವ ನಾಯಕಿ ವೈನ್‌ನಂತೆ ನಿಧಾನಕ್ಕೆ ನಮ್ಮೊಳಗನ್ನು ಸಂಪೂರ್ಣ ಆವರಿಸುತ್ತಾಳೆ. ಇಂಥಾ ಸೂಕ್ಷ್ಮ, ನವಿರು ಸಿನಿಮಾ ನಿರೂಪಿಸಿದ ನಿರ್ದೇಶಕ ಚಂದ್ರಜಿತ್‌ ಬೆಳ್ಯಪ್ಪ ಅಭಿನಂದನಾರ್ಹರು.

ಆದರೆ ಒಂದು ಹೊತ್ತಲ್ಲಿ ಸಿನಿಮಾ ದೀರ್ಘವಾಯಿತು ಅನಿಸುವುದು ಕೊರತೆ. ಶ್ರೀವಾತ್ಸನ್‌ ಸೆಲ್ವರಾಜನ್‌ ಅವರ ಸಿನಿಮಾಟೋಗಫಿ ನಾವು ಕಾಣುವ ಜಗತ್ತನ್ನು ಮತ್ತಷ್ಟು ಸುಂದರವಾಗಿ ಕಟ್ಟಿಕೊಡುತ್ತದೆ. ಗಗನ್‌ ಬಡೇರಿಯಾ ಸಂಗೀತ ಕಥೆಯ ಮೂಡ್‌ಗೆ ಕರೆದೊಯ್ಯುತ್ತದೆ. ಅಂಕಿತಾ ಅಮರ್‌ ಮಾತು, ಕಣ್ಣುಗಳ ಚಲನೆ, ಮ್ಯಾನರಿಸಂ ಮೂಲಕ ಅದ್ಭುತವಾಗಿ ಅನಾಹಿತಳನ್ನು ಕಟ್ಟಿಕೊಟ್ಟಿದ್ದಾರೆ. ವಿಹಾನ್‌ ಎರಡು ಶೇಡ್‌ನಲ್ಲಿ ಸೊಗಸಾಗಿ ನಟಿಸಿದ್ದಾರೆ. ರಾಧೆ ಪಾತ್ರದ ಮಯೂರಿ ನಟನೆಯಲ್ಲೂ ಲಾಲಿತ್ಯವಿದೆ.

ಹುಲ್ಲಿನ ಮೇಲಿರುವ ಇಬ್ಬನಿಯ ಇರವು ಎಳೆ ಬಿಸಿಲಿರುವ ತನಕ ಮಾತ್ರ. ಆದರೆ ಸೌಂದರ್ಯ ಆಸ್ವಾದಿಸುವವರಿಗೆ ಈ ಸಣ್ಣ ಅವಧಿಯಲ್ಲಿ ಪ್ರತೀ ಕ್ಷಣವೂ ಅಮೂಲ್ಯ, ಉಳಿದವರಿಗೆ ಅರ್ಥಹೀನ. ಇದು ಏಕಕಾಲಕ್ಕೆ ಕಾವ್ಯವೂ, ಅನಾಹಿತ ಬದುಕಿನ ಸಾರವೂ ಹೌದು.

ಎಲ್ಲ ಮರೆತು ಪ್ರೇಮದ ಧ್ಯಾನದಲ್ಲಿ ಮುಳುಗಿ ಹೋಗಲು ಇಚ್ಛಿಸುವವರು ಈ ಸಿನಿಮಾ ನೋಡಬಹುದು.