ಕಿರುತೆರೆ ವರ್ಸಸ್ ಹಿರಿತೆರೆ

| Published : Jun 28 2024, 12:48 AM IST / Updated: Jun 28 2024, 05:13 AM IST

ಸಾರಾಂಶ

ಹಿರಿತೆರೆ ಖಾಲಿ ಹೊಡೀತಿರೋದಕ್ಕೆ ಕಿರುತೆರೆಯ ಆಕರ್ಷಣೆ ಕಾರಣವಾ?

- ಪ್ರಿಯಾ ಕೆರ್ವಾಶೆ

ನೀವು ಸಿನಿಮಾ ನೋಡಿ ಯಾವ ಕಾಲವಾಯಿತು ಅಂತ ವಾರಕ್ಕೆರಡು ಸಿನಿಮಾ ನೋಡುತ್ತಿದ್ದ ಆಟೋಡ್ರೈವರ್, ಹೊಟೆಲ್ ಹುಡುಗರು, ತರುಣ-ತರುಣಿಯರನ್ನು ಕೇಳಿದರೆ, ಅವರು ಲೆಕ್ಕ ಹಾಕಲು ಶುರುಮಾಡುತ್ತಾರೆ. ಥಟ್ಟನೆ ಅವರಿಗೆ ಯಾವ ಸಿನಿಮಾ ಕೂಡ ನೆನಪಾಗುವುದಿಲ್ಲ. ಕಳೆದ ವಾರ ಬಿಡುಗಡೆಯಾದ ಸಿನಿಮಾಗಳ ಪಟ್ಟಿ ಕೇಳಿದರೆ ಚಿತ್ರೋದ್ಯಮದಲ್ಲಿ ಇರುವವರೇ ಕಂಗಾಲಾಗುತ್ತಾರೆ. ಅವರಿಗೂ ಗೊತ್ತಿರುವುದಿಲ್ಲ.

ಸ್ಯಾಂಡಲ್‌ವುಡ್‌ ಥಿಯೇಟರಿಗೆ ಜನ ಬರದೇ ಹೈರಾಣಾಗಿದೆ. ಆದರೆ ಕನ್ನಡ ಕಿರುತೆರೆ ಸಾಕಷ್ಟು ವೀಕ್ಷಣಾ ಸಂಖ್ಯೆಯಿಂದ ಸಮೃದ್ಧವಾಗಿದೆ. ಚಾನೆಲ್‌ಗಳ ಜಿಆರ್‌ಪಿ (ಗ್ರಾಸ್‌ ರೇಟಿಂಗ್‌ ಪಾಯಿಂಟ್‌)ನಲ್ಲಿ ಆಗುತ್ತಿರುವ ಏರಿಕೆ; ಪ್ರೇಕ್ಷಕರು ಸಿನಿಮಾ ಮಾಧ್ಯಮದ ಬದಲಿಗೆ ಟಿವಿ ಮಾಧ್ಯಮವನ್ನು ನೆಚ್ಚಿಕೊಂಡಿರುವುದಕ್ಕೆ ಸಾಕ್ಷಿಯಂತೆ ಕಾಣುತ್ತಿದೆ.

ಜಿಆರ್‌ಪಿ ವಿಚಾರಕ್ಕೆ ಬಂದರೆ ಕಳೆದ ಕೆಲವು ವಾರಗಳ ಜಿಆರ್‌ಪಿ ಪಟ್ಟಿಯಲ್ಲಿ ಜೀ ಕನ್ನಡ ಸುಮಾರು 600 ರಿಂದ 650 ಜಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿರುವ ಕಲರ್ಸ್‌ ಕನ್ನಡ 400 ರಿಂದ 450 ಜಿಆರ್‌ಪಿ ಪಡೆಯುತ್ತಿದೆ. ಸ್ಟಾರ್‌ ಸುವರ್ಣ ಜಿಆರ್‌ಪಿ ಸುಮಾರು 350ರ ಆಸುಪಾಸಿನಲ್ಲಿದ್ದರೆ, ಉದಯ ಟಿವಿ ಸುಮಾರು 200 ಜಿಆರ್‌ಪಿ ಪಡೆಯುತ್ತಿದೆ.

ಕಿರುತೆರೆಯತ್ತ ಜನರ ಚಿತ್ತ ಯಾವ ರೀತಿ ಹೊರಳುತ್ತಿದೆ ಎಂಬುದಕ್ಕೆ ಈ ಪಾಯಿಂಟ್‌ಗಳನ್ನು ಸಾಕ್ಷಿಯಾಗಿ ಪರಿಗಣಿಸಬಹುದೇನೋ. ಜನ ಸಿನಿಮಾದಿಂದ ಕಿರುತೆರೆಯತ್ತ ಹೊರಳಲು ಇಲ್ಲಿನ ವಿಶುವಲ್‌ ಟ್ರೀಟ್‌, ತಾಂತ್ರಿಕ ಶ್ರೀಮಂತಿಕೆ, ಜನರಿಗೆ ಬೇಕಾದಂಥಾ ಕಥಾಹಂದರವನ್ನು ಹೊಂದಿರುವುದು ಪ್ರಮುಖ ಕಾರಣ ಎನ್ನಬಹುದು.

ಈ ಬಗ್ಗೆ ಮಾತನಾಡುವ ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪ್ರಶಾಂತ್‌ ನಾಯಕ್‌, ‘ಕೋವಿಡ್‌ ನಂತರ ಜನರಲ್ಲಿ ತಾವು ಇದ್ದಲ್ಲೇ ಮನರಂಜನೆ ಪಡೆಯುವ ಹವ್ಯಾಸ ಶುರುವಾಯಿತು. ಆ ಅಗತ್ಯಕ್ಕೆ ತಕ್ಕಂತೆ ಡಿಜಿಟಲ್ ಮನರಂಜನಾ ಜಗತ್ತೂ ಅಗಾಧವಾಗಿ ಬೆಳೆಯಿತು. ಈಗ ವಿಶುವಲ್‌ ಟ್ರೀಟ್‌ಮೆಂಟ್‌ ವಿಚಾರಕ್ಕೆ ಬಂದರೆ ಕಿರುತೆರೆಯ ಕಾರ್ಯಕ್ರಮಗಳ ಗುಣಮಟ್ಟ ಸಿನಿಮಾವನ್ನು ಮೀರಿಸುವಂತಿದೆ. ನಾವು ಬಳಸುವ ಕ್ಯಾಮರಾಗಳು ಯಾವ ಸಿನಿಮಾ ಕ್ಯಾಮರಾಗಳಿಗೂ ಕಡಿಮೆಯವಲ್ಲ. ತಾಂತ್ರಿಕವಾಗಿ ಬಹಳ ಮುಂದಿದ್ದೇವೆ. ಇದಲ್ಲದೇ ಕಮಲಹಾಸನ್‌ರಿಂದ ಸಲ್ಮಾನ್‌ಖಾನ್‌ವರೆಗೆ ಎಲ್ಲ ತಾರೆಯರೂ ವೀಕೆಂಡ್‌ ಆದರೆ ಟಿವಿಯಲ್ಲೇ ಸಿಗುತ್ತಾರೆ. 

ಅಷ್ಟೇ ಅಲ್ಲ, ಟಿವಿ ಸೀರಿಯಲ್‌ ತಾರೆಯರು ಯಾವ ಸಿನಿಮಾ ನಾಯಕಿಯರಿಗೂ ಕಡಿಮೆ ಇಲ್ಲ. ಹಾಗೆ ನೋಡಿದರೆ ಸಿನಿಮಾರಂಗದಲ್ಲಿರುವ ಹೆಚ್ಚಿನೆಲ್ಲ ಕಲಾವಿದರ ಮೂಲನೆಲೆ ಕಿರುತೆರೆಯೇ. ಹೀಗೆ ಇಷ್ಟೆಲ್ಲ ಅಗತ್ಯಗಳನ್ನು ಕಿರುತೆರೆಯೇ ಪೂರೈಸುವಾಗ ಜನರು ಯಾಕೆ ಥಿಯೇಟರ್‌ನತ್ತ ಹೊರಳುತ್ತಾರೆ?’ ಎನ್ನುತ್ತಾರೆ. ಇದನ್ನು ಕನ್ನಡ ಚಿತ್ರರಂಗ ಹದಿನೈದು ವರ್ಷಗಳ ಹಿಂದೆಯೇ ಹೇಳಿತ್ತು. ಸ್ಟಾರುಗಳು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಅಂತ ತಕರಾರು ಮಾಡಿತ್ತು. ಈಗ ಇದನ್ನು ಟೀವಿ ವಾಹಿನಿಗಳು ಹೇಳುತ್ತಿವೆ. ಅದು ವ್ಯತ್ಯಾಸ.

ಆದರೆ ಕಿರುತೆರೆಯ ಹಿರಿಯ ನಿರ್ಮಾಪಕ ರಾಮ್‌ಜಿ ಪ್ರಕಾರ ಸಿನಿಮಾಗಳಿಗೆ ಕಿರುತೆರೆ ಪರ್ಯಾಯವಾಗಲಾರದು. ‘ಒಳ್ಳೆಯ ಸಿನಿಮಾ ಬಂದರೆ ಜನ ಥಿಯೇಟರ್‌ಗೆ ಬಂದೇ ಬರುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಒಟ್ಟಾರೆ ಸ್ಯಾಂಡಲ್‌ವುಡ್‌ ಮುಂದಿರುವ ಚಾಲೆಂಜ್‌ಗಳು ಹೆಚ್ಚಾಗುತ್ತಲೇ ಇವೆ. ತಾಂತ್ರಿಕತೆ, ಗಟ್ಟಿಕಥೆ, ಸಮರ್ಥ ಕಲಾವಿದರ ಮೂಲಕ ಈ ಸವಾಲುಗಳನ್ನು ಮೀರಿ ಬೆಳೆಯದೇ ಬೇರೆ ದಾರಿಯಿಲ್ಲ.