ಡೆವಿಲ್, ಬಘೀರ ಈ ವರ್ಷ ರಿಲೀಸ್ ಆಗತ್ತಾ!

| Published : May 08 2024, 01:07 AM IST

ಸಾರಾಂಶ

ಬಹು ನಿರೀಕ್ಷಿತ ಡೆವಿಲ್‌, ಬಘೀರ ಸಿನಿಮಾಗಳ ರಿಲೀಸ್ ಸ್ಟಾರ್‌ ನಟರ ಗಾಯದ ಸಮಸ್ಯೆಯಿಂದ ಮತ್ತಷ್ಟು ವಿಳಂಬವಾಗುತ್ತಿದೆ.

ಕನ್ನಡಪ್ರಭ ಸಿನಿವಾರ್ತೆ

ದರ್ಶನ್ ನಟನೆಯ ‘ಡೆವಿಲ್’ ಮತ್ತು ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾಗಳು ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಾಗಿವೆ. ಆ ಸಿನಿಮಾಗಳ ಬಿಡುಗಡೆಯಿಂದ ಚಿತ್ರರಂಗಕ್ಕೆ ಮತ್ತಷ್ಟು ಹುರುಪು ತುಂಬುವ ಭರವಸೆ ಇತ್ತು. ಆದರೆ ಇವೆರಡೂ ಸಿನಿಮಾಗಳ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ಸುಲಭ ಉತ್ತರ ಸಿಗುವುದಿಲ್ಲ. ಅದಕ್ಕೆ ಕಾರಣ ಗಾಯದ ಸಮಸ್ಯೆ.

ದರ್ಶನ್‌ ನಟನೆಯ ‘ಡೆವಿಲ್‌’ ಶೂಟಿಂಗ್‌ ವೇಳೆ ಫೈಟ್‌ ಸೀನ್‌ನಲ್ಲಿ ದರ್ಶನ್‌ ಎಡಗೈಗೆ ಕೈಗೆ ಏಟಾದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ವೈದ್ಯರು 1 ತಿಂಗಳ ವಿಶ್ರಾಂತಿ ಸೂಚಿಸಿದ್ದರು. ಹೀಗಾಗಿ ಚಿತ್ರೀಕರಣಕ್ಕೆ ಬ್ರೇಕ್‌ ಬಿತ್ತು. ಹಾಗಾಗಿ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ರಿಲೀಸ್ ಆಗುವುದು ಕಷ್ಟವಿದೆ.

ಶ್ರೀಮುರಳಿಯವರಂತೂ ‘ಬಘೀರ’ ಸಿನಿಮಾ ಶುರುವಾದಾಗಿನಿಂದ ಆ್ಯಕ್ಷನ್‌ ಸೀಕ್ವೆನ್ಸ್‌ಗಳಲ್ಲಿ ಏಟು ಮಾಡಿಕೊಳ್ಳುತ್ತಲೇ ಇದ್ದಾರೆ. ಈ ಚಿತ್ರದ ಬಿಡುಗಡೆಯೂ ವಿಳಂಬವಾಗಲಿದೆ. ಇತ್ತೀಚೆಗೆ ಈ ಕುರಿತು ಮಾತನಾಡಿದ ಶ್ರೀಮುರಳಿ, ‘ಶೂಟಿಂಗ್‌ ವೇಳೆ ಏಟಾದ ಕಾರಣ ಶೂಟಿಂಗ್‌ ಮತ್ತೆ ಸ್ಥಗಿತಗೊಂಡಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಇನ್ನೂ 20 ದಿನಗಳ ಚಿತ್ರೀಕರಣ ಬಾಕಿ ಇದೆ. ಆದರೆ ಸಿನಿಮಾ ರಿಲೀಸ್‌ಗೆ ಇನ್ನೂ ಏನಿಲ್ಲ ಅಂದರೂ ನಾಲ್ಕು ತಿಂಗಳು ಬೇಕೇ ಬೇಕು’ ಎಂದಿದ್ದಾರೆ.

ಹಾಗಾಗಿ ಸ್ಟಾರ್‌ಗಳ ಚಿತ್ರಗಳಿಲ್ಲದೇ ಬಿಕೋ ಎನ್ನುತ್ತಿರುವ ಥಿಯೇಟರ್‌ಗಳು ಸ್ಟಾರ್‌ಗಳ ಗಾಯಗಳ ಸಮಸ್ಯೆಯಿಂದ ಮತ್ತಷ್ಟು ಕಷ್ಟ ಅನುಭವಿಸಲಿದೆ.